Covid Threat: ರಣಜಿ ಟ್ರೋಫಿ ಅನಿರ್ದಿಷ್ಟಾವಧಿ ಮುಂದಕ್ಕೆ..!

* ಕೊರೋನಾ ಭೀತಿಯಿಂದಾಗಿ ದೇಶಿ ಕ್ರಿಕೆಟ್‌ ಟೂರ್ನಿಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

* ಜನವರಿ 13ರಿಂದ ಆರಂಭವಾಗಬೇಕಿದ್ದ ರಣಜಿ ಟ್ರೋಫಿ ಟೂರ್ನಿ ಕೂಡಾ ಮುಂದಕ್ಕೆ

* ರಣಜಿ ಟ್ರೋಫಿ ಜನವರಿ13ರಿಂದ ಬೆಂಗಳೂರು, ಕೋಲ್ಕತಾ ಸೇರಿ 6 ನಗರಗಳಲ್ಲಿ ನಡೆಯಬೇಕಿತ್ತು.

Ranji Trophy and Domestic Cricket Tournaments put on hold due to surge in COVID cases kvn

ನವದೆಹಲಿ(ಜ.05): ದೇಶದಲ್ಲಿ ಕೋವಿಡ್‌ ಪ್ರಕರಣಗಳು (Coronavirus) ವೇಗವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆಟಗಾರರು, ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಬಿಸಿಸಿಐ ರಣಜಿ ಟ್ರೋಫಿ ಸೇರಿದಂತೆ ಎಲ್ಲಾ ದೇಸಿ ಕ್ರಿಕೆಟ್‌ (Domestic Cricket Tournament) ಟೂರ್ನಿಗಳನ್ನು ಮುಂದೂಡಿದೆ. ರಣಜಿ ಟ್ರೋಫಿ (Ranji Trophy) ಜನವರಿ13ರಿಂದ ಬೆಂಗಳೂರು, ಕೋಲ್ಕತಾ ಸೇರಿ 6 ನಗರಗಳಲ್ಲಿ ನಡೆಯಬೇಕಿತ್ತು. ಸಿ.ಕೆ.ನಾಯ್ಡು ಟ್ರೋಫಿ, ಹಿರಿಯ ಮಹಿಳೆಯರ ಟಿ20 ಲೀಗ್‌, ಕೂಚ್‌ ಬಿಹಾರ್‌ ಅಂಡರ್‌-19 ಟೂರ್ನಿಯ ನಾಕೌಟ್‌ ಪಂದ್ಯಗಳನ್ನೂ ಮುಂದೂಡಿರುವುದಾಗಿ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಟೂರ್ನಿಗಳನ್ನು ನಡೆಸುವುದಾಗಿ ಬಿಸಿಸಿಐ(BCCI) ಮಾಹಿತಿ ನೀಡಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸಿರುವ ಲೀಗ್‌ ಪಂದ್ಯಗಳೂ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಜಗತ್ತಿನಾದ್ಯಂತ ಕ್ರೀಡಾ ಟೂರ್ನಿಗಳಿಗೆ ಸಮಸ್ಯೆ

ನವದೆಹಲಿ: ಜಗತ್ತಿನಾದ್ಯಂತ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಇದರ ನೇರ ಪರಿಣಾಮ ಕ್ರೀಡೆಯ ಮೇಲೆ ಆಗುತ್ತಿದೆ. ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ, ಕ್ಲಬ್‌ ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಟೂರ್ನಿಗಳು ರದ್ದಾಗುವ ಇಲ್ಲವೇ ಮುಂದೂಡಿಕೆಯಾಗುವ ಹಂತ ತಲುಪಿವೆ.

ಕಳೆದೆರಡು ವರ್ಷಗಳಲ್ಲಿ ಕೋವಿಡ್‌ ಕಾರಣದಿಂದ ಒಲಿಂಪಿಕ್ಸ್‌(Olympics), ಟಿ20 ಕ್ರಿಕೆಟ್‌ ವಿಶ್ವಕಪ್‌(ICC T20 World Cup), ಐಪಿಎಲ್‌ (Indian Premier League) ಸೇರಿದಂತೆ ಹಲವು ಜಾಗತಿಕ ಮಟ್ಟದ ಕ್ರೀಡಾಕೂಟಗಳು ಮುಂದೂಡಿಕೆಯಾಗಿದ್ದವು. ಇದೀಗ ಯುರೋಪ್‌ನ ಪ್ರತಿಷ್ಠಿತ ಫುಟ್ಬಾಲ್‌ ಟೂರ್ನಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನಲ್ಲಿ ಡಿ.27ರಿಂದ ಜ.2ರ ವರೆಗೆ 94 ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಟೂರ್ನಿ ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಳ್ಳುವ ಹಂತ ತಲುಪಿದೆ. ಫ್ರಾನ್ಸ್‌ನ ದೇಸಿ ಲೀಗ್‌ನಲ್ಲೂ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ಲಿಯೋನೆಲ್‌ ಮೆಸ್ಸಿ ಸೇರಿ ಹಲವರು ಸೋಂಕಿಗೆ ತುತ್ತಾಗಿದ್ದಾರೆ.

COVID Threat For Ranji Trophy: ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಕೊರೋನಾಘಾತ..!

ವೆಸ್ಟ್‌ಇಂಡೀಸ್‌ನಲ್ಲಿ ಜ.14ರಿಂದ ಆರಂಭಗೊಳ್ಳಬೇಕಿರುವ ಅಂಡರ್‌-19 ವಿಶ್ವಕಪ್‌ಗೂ ಕೋವಿಡ್‌ ಆತಂಕ ಎದುರಾಗಿದೆ. ಮಂಗಳವಾರ ಜಿಂಬಾಬ್ವೆ ತಂಡದ 4 ಆಟಗಾರರಲ್ಲಿ ಸೋಂಕು ಪತ್ತೆಯಾಗಿದೆ. ಬಯೋಬಬಲ್‌ನೊಳಗೆ ನಡೆಯುತ್ತಿದ್ದ ಆಸ್ಪ್ರೇಲಿಯಾದ ಪ್ರಮುಖ ದೇಸಿ ಕ್ರಿಕೆಟ್‌ ಟೂರ್ನಿಗಳು ಕೋವಿಡ್‌ ಕಾರಣದಿಂದಾಗಿ ಸ್ಥಗಿತಗೊಂಡಿವೆ. ದಕ್ಷಿಣ ಆಫ್ರಿಕಾದಲ್ಲಿ ದೇಸಿ ಕ್ರಿಕೆಟ್‌ ಟೂರ್ನಿಗಳನ್ನು ಮುಂದೂಡಲಾಗಿದೆ.

ಇನ್ನು ಭಾರತದಲ್ಲೂ ಕೋವಿಡ್‌ ಕಾಟ ಜೋರಾಗಿದ್ದು, ಐ-ಲೀಗ್‌ ಫುಟ್ಬಾಲ್‌ ಟೂರ್ನಿ ತಾತ್ಕಾಲಿಕ ಸ್ಥಗಿತಗೊಂಡಿದೆ. ಬೆಂಗಾಲ್‌, ಮುಂಬೈ ಆಟಗಾರರಲ್ಲಿ ಸೋಂಕು ಪತ್ತೆಯಾದ ಕಾರಣ ರಣಜಿ ಟ್ರೋಫಿ ಕೂಡಾ ಮುಂದೂಡಿಕೆಯಾಗುವ ಭೀತಿ ಇದೆ. ಇದೇ ವೇಳೆ 15ನೇ ಆವೃತ್ತಿಯ ಐಪಿಎಲ್‌ ಕೂಡಾ ಭಾರತದಲ್ಲಿ ನಡೆಯುವುದು ಅನುಮಾನವೆನಿಸಿದೆ.

ಕೋವಿಡ್‌ ಹೆಚ್ಚಳ: ಐಪಿಎಲ್‌ ಹರಾಜು ಸ್ಥಳಾಂತರ ಸಾಧ್ಯತೆ

ಬೆಂಗಳೂರು: ಐಪಿಎಲ್‌ ಮೆಗಾ ಹರಾಜು (IPL Mega Auction) ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ಇದ್ದು, ದಿನಾಂಕವೂ ಬದಲಾಗಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಬೆಂಗಳೂರಿನಲ್ಲಿ (Bengaluru) ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆ ಇದೆ. ಹೀಗಾಗಿ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಗುರುತಿಸಿರುವ ಹೋಟೆಲ್‌ಗಳು ಇನ್ನು ಕೆಲ ದಿನಗಳ ಕಾಲ ಕಾಯ್ದು ಆ ಬಳಿಕ ಹೋಟೆಲ್‌ ಕಾಯ್ದಿರಿಸಲು ಬಿಸಿಸಿಐ ಅಧಿಕಾರಿಗಳಿಗೆ ಸೂಚಿಸಿವೆ ಎನ್ನಲಾಗಿದೆ.

ಈ ಮೊದಲು 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಇದೀಗ ಸ್ಥಳ ಹಾಗೂ ಸಮಯ ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ
 

Latest Videos
Follow Us:
Download App:
  • android
  • ios