Asianet Suvarna News Asianet Suvarna News

COVID Threat For Ranji Trophy: ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಕೊರೋನಾಘಾತ..!

* 87ನೇ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿ ಮೇಲೆ ಕೊರೋನಾ ವಕ್ರದೃಷ್ಟಿ

* ಬೆಂಗಾಲ್ ತಂಡದ ಏಳು ಆಟಗಾರರಿಗೆ ಕೊರೋನಾ ಪಾಸಿಟಿವ್

* ಜನವರಿ 13ರಿಂದ ರಣಜಿ ಟ್ರೋಫಿ ಟೂರ್ನಿಗೆ ಚಾಲನೆ ಸಿಗಲಿದೆ

Ranji Trophy 7 Bengal players test COVID positive Team training sessions cancelled kvn
Author
Bengaluru, First Published Jan 4, 2022, 8:50 AM IST

ಕೋಲ್ಕತಾ(ಜ.04): ದೇಸಿ ಕ್ರಿಕೆಟ್‌ ಟೂರ್ನಿ ರಣಜಿ ಟ್ರೋಫಿ (Ranji Trophy) ಆರಂಭಕ್ಕೂ ಮುನ್ನ ಟೂರ್ನಿಗೆ ಕೊರೋನಾ (Coronavirus) ಆಘಾತ ಎದುರಾಗಿದ್ದು, ಬೆಂಗಾಲ್‌ ತಂಡದ (Bengal Cricket Team) ಏಳು ಹಾಗೂ ಮುಂಬೈ ತಂಡದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಟೂರ್ನಿಯ ಅಭ್ಯಾಸದಲ್ಲಿ ನಿರತರಾಗಿದ್ದ ಬೆಂಗಾಲ್‌ನ ಸುದೀಪ್‌ ಚಟರ್ಜಿ, ಅನುಸ್ತುಪ್‌ ಮಜುಂದಾರ್‌, ಕಾಜಿ ಜುನೈದ್‌, ಗೀತ್‌ ಪುರಿ, ಪ್ರದೀಪ್ತ ಪ್ರಮಾಣಿಕ್‌, ಸುರಾಜಿತ್‌ ಯಾದವ್‌ ಹಾಗೂ ಸಹಾಯಕ ಕೋಚ್‌ ಸೌರಶಿಶ್‌ ಲಹಿರಿಗೆ ಸೋಂಕು ತಗುಲಿರುವುದು ಆರ್‌ಟಿ-ಪಿಸಿಆರ್‌ ಪರೀಕ್ಷೆಯಿಂದ (RT-PCR Test) ತಿಳಿದುಬಂದಿದೆ.

ಇನ್ನು, ಮುಂಬೈ ಆಲ್ರೌಂಡರ್‌ ಶಿವಂ ದುಬೆ (Shivam Dube) ಹಾಗೂ ತಂಡದ ವಿಡಿಯೋ ವಿಶ್ಲೇಷಕಗೆ ಸೋಂಕು ದೃಢಪಟ್ಟಿದೆ. ದುಬೆ ಬದಲು ಸಾಯಿರಾಜ್‌ ಪಾಟೀಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕೊರೋನಾ ಪ್ರಕರಣಗಳು ಹಿನ್ನೆಲೆಯಲ್ಲಿ 2020-21ರ ಸಾಲಿನ ರಣಜಿ ಟ್ರೋಫಿ ರದ್ದಾಗಿತ್ತು. ಈ ಬಾರಿ ಟೂರ್ನಿ ಆರಂಭಕ್ಕೆ ಕೆಲ ದಿನಗಳ ಮುನ್ನ ಸೋಂಕು ಪತ್ತೆಯಾಗಿದ್ದು, ವೇಳಾಪಟ್ಟಿ ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಟೂರ್ನಿ ಜನವರಿ 13ಕ್ಕೆ ಆರಂಭವಾಗಬೇಕಿದ್ದು, ಎಲೈಟ್‌ ‘ಬಿ’ ಗುಂಪಿನಲ್ಲಿರುವ ಬೆಂಗಾಲ್‌, ತ್ರಿಪುರಾ ವಿರುದ್ಧ ಹಾಗೂ ಎಲೈಟ್‌ ‘ಸಿ’ ಗುಂಪಿನಲ್ಲಿರುವ ಮುಂಬೈ, ಮಹಾರಾಷ್ಟ್ರ ವಿರುದ್ಧ ಆಡಬೇಕಿದೆ.

ಟೂರ್ನಿ ನಿಗದಿಯಂತೆ ನಡೆಯಲಿದೆ: ಗಂಗೂಲಿ

ಕೋಲ್ಕತಾ: ಆಟಗಾರರು ಮತ್ತು ಸಿಬ್ಬಂದಿಗೆ ಕೊರೋನಾ ಸೋಂಕು (COVID 19) ದೃಢಪಟ್ಟ ಹೊರತಾಗಿಯೂ 87ನೇ ಆವೃತ್ತಿಯ ರಣಜಿ ಟ್ರೋಫಿ ನಿಗದಿಯಂತೆ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಖಚಿತಪಡಿಸಿದ್ದಾರೆ. ಈ ಬಗ್ಗೆ ಸೋಮವಾರ ಅವರು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಟೂರ್ನಿ ಜನವರಿ 13ಕ್ಕೆ ಆರಂಭವಾಗಬೇಕಿದೆ.

ಮಣಿಪುರ ತಂಡಕ್ಕೆ ರಾಜ್ಯದ ರಾಜೂ ಭಟ್ಕಳ್‌ ಕೋಚ್‌

ಬೆಂಗಳೂರೂ: ಕರ್ನಾಟದ ಮಾಜಿ ಆಟಗಾರ ರಾಜೂ ಭಟ್ಕಳ ಅವರು ಮಣಿಪುರ ರಣಜಿ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಬಲಗೈ ಬ್ಯಾಟರ್‌ ಹಾಗೂ ಮಧ್ಯಮ ವೇಗದ ಬೌಲರ್‌ ಆಗಿರುವ 36 ವರ್ಷದ ರಾಜೂ, ರಾಜ್ಯ ರಣಜಿ ತಂಡದ ಪರ ಆಡಿದ್ದರು. ‘ಮಣಿಪುರ ತಂಡದೊಂದಿಗೆ 1 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ಫೀಲ್ಡಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದು ಸಂತೋಷ ನೀಡಿದೆ. ತಂಡಕ್ಕೆ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡುತ್ತೇನೆ’ ಎಂದು ರಾಜೂ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Ind vs SA, 2nd Test: ರಹಾನೆ-ಪೂಜಾರಗೆ ಗೇಟ್‌ಪಾಸ್ ಕೊಡಿ, ಯುವಕರಿಗೆ ಚಾನ್ಸ್‌ ನೀಡಿ ಎಂದ ಫ್ಯಾನ್ಸ್‌..!

2 ಪ್ರಥಮ ದರ್ಜೆ, 21 ಲಿಸ್ಟ್‌ ‘ಎ’ ಹಾಗೂ 20 ಟಿ20 ಪಂದ್ಯಗಳನ್ನು ಆಡಿರುವ ರಾಜೂ, ಐಪಿಎಲ್‌ನಲ್ಲಿ ಆರ್‌ಸಿಬಿ (RCB) ಪರ, ಕೆಪಿಎಲ್‌ನಲ್ಲಿ ಮಲ್ನಾಡ್‌ ಗ್ಲೇಡಿಯೇಟ​ರ್ಸ್‌, ಮೈಸೂರು ವಾರಿಯ​ರ್ಸ್‌ ಪರ ಆಡಿದ್ದರು.

ಜನವರಿ 05ರಿಂದ ಆಸೀಸ್‌-ಇಂಗ್ಲೆಂಡ್‌ 4ನೇ ಟೆಸ್ಟ್‌

ಸಿಡ್ನಿ: ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ (Australia vs England) ನಡುವಿನ ಆ್ಯಷಸ್‌ ಸರಣಿಯ (Ashes Test Series) 4ನೇ ಪಂದ್ಯ ಬುಧವಾರದಿಂದ ಆರಂಭವಾಗಲಿದೆ. 5 ಪಂದ್ಯಗಳ ಸರಣಿಯಲ್ಲಿ ಆತಿಥೇಯ ಆಸೀಸ್‌ ಈಗಾಗಲೇ 3-0 ಅಂತರದಲ್ಲಿ ಸರಣಿ ಜಯಿಸಿದ್ದು, ಕ್ಲೀನ್‌ಸ್ವೀಪ್‌ ಮೇಲೆ ಕಣ್ಣಿಟ್ಟಿರುವ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. 

ಸತತ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್‌ ಮೊದಲ ಗೆಲುವಿಗಾಗಿ ಕಾತರಿಸುತ್ತಿದೆ. ನಾಯಕ ಜೋ ರೂಟ್‌ (Joe Root) ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಉಳಿದವರಿಂದ ನಿರೀಕ್ಷಿತ ಆಟ ಕಂಡು ಬರುತ್ತಿಲ್ಲ. ಇನ್ನು, ಕೋವಿಡ್‌ಗೆ ತುತ್ತಾಗಿರುವ ಆಸೀಸ್‌ ಬ್ಯಾಟರ್‌ ಟ್ರ್ಯಾವಿಸ್‌ ಹೆಡ್‌ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದು, ಅವರ ಬದಲು ಉಸ್ಮಾನ್‌ ಖವಾಜ ಆಡುವ ಸಾಧ್ಯತೆ ಇದೆ.
 

Follow Us:
Download App:
  • android
  • ios