ರಾಂಚಿ[ಅ.20]: ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್’ನಲ್ಲೂ ದ್ವಿಶತಕ ಬಾರಿಸಲು ಕೇವಲ ಇನ್ನೊಂದು ರನ್ ಅವಶ್ಯಕತೆಯಿದೆ. ಈಗಾಗಲೇ ಏಕದಿನ ಕ್ರಿಕೆಟ್’ನಲ್ಲಿ ಮೂರು ದ್ವಿಶತಕ ಸಿಡಿಸಿರುವ ರೋಹಿತ್ ರೆಡ್ ಬಾಲ್ ಕ್ರಿಕೆಟ್’ನಲ್ಲಿ ಚೊಚ್ಚಲ ದ್ವಿಶತಕ ಬಾರಿಸುವ ಹೊಸ್ತಿಲಲ್ಲಿದ್ದಾರೆ. ಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಭಾರತ 4 ವಿಕೆಟ್ ಕಳೆದು ಕೊಂಡು 357 ರನ್ ಬಾರಿಸಿದೆ. ರೋಹಿತ್ 199 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ರಾಂಚಿ ಟೆಸ್ಟ್: ಶತಕ ಸಿಡಿಸಿ ವಿಕೆಟ್ ಒಪ್ಪಿಸಿದ ರಹಾನೆ

ರಾಂಚಿ ಟೆಸ್ಟ್’ನಲ್ಲಿ ಮೊದಲ ದಿನದಾಟದ ಆರಂಭದಲ್ಲಿ ಭಾರತ ವಿಕೆಟ್ ಕಳೆದುಕೊಂಡಿತ್ತು. ಆದರೆ ರೋಹಿತ್-ರಹಾನೆ ಜೋಡಿ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಇನ್ನು ಎರಡನೇ ದಿನದಾಟದಲ್ಲೂ ರಹಾನೆ-ರೋಹಿತ್ ವೈಭವದ ಬ್ಯಾಟಿಂಗ್ ಮುಂದುವರೆಸಿತು. ಈ ಮುಂಬೈಕರ್ಸ್ ಜೋಡಿ ನಾಲ್ಕನೇ ವಿಕೆಟ್’ಗೆ 267 ರನ್’ಗಳ ಜತೆಯಾಟ ನಿಭಾಯಿಸಿತು. ರಹಾನೆ 115 ರನ್ ಬಾರಿಸಿ ಲಿಂಡೆಗೆ ಚೊಚ್ಚಲ ಬಲಿಯಾದರು. ಆ ಬಳಿಕ 5ನೇ ವಿಕೆಟ್’ಗೆ ರೋಹಿತ್-ರವೀಂದ್ರ ಜಡೇಜಾ ಜೋಡಿ 51 ರನ್’ಗಳ ಜತೆಯಾಟ ನಿಭಾಯಿಸಿದೆ.

ರಾಂಚಿ ಟೆಸ್ಟ್: ರೋಹಿತ್-ರಹಾನೆ ಶತಕದ ಜತೆಯಾಟ, ಭಾರತಕ್ಕೆ ಮೊದಲ ದಿನದ ಗೌರವ

ಮನಮೋಹಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 242 ಎಸೆತಗಳಲ್ಲಿ 28 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 199 ರನ್ ಬಾರಿಸಿದ್ದಾರೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯೊಂದರಲ್ಲಿ 500+ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ದಾಖಲೆಗೂ ಪಾತ್ರರಾದರು. 

ಇದರ ಜತೆಗೆ ಟೆಸ್ಟ್ ಸರಣಿಯಲ್ಲಿ 500+ ರನ್ ಬಾರಿಸಿದ ಭಾರತದ 5ನೇ ಆರಂಭಿಕ ಬ್ಯಾಟ್ಸ್’ಮನ್ ಎನ್ನುವ ಗೌರವಕ್ಕೂ ರೋಹಿತ್ ಭಾಜನರಾಗಿದ್ದಾರೆ. ಈ ಮೊದಲು ವಿನೂ ಮಂಕಡ್, ಬೋಧಿ ಕುಂದೆರನ್, ಸುನಿಲ್ ಗವಾಸ್ಕರ್[5], ವಿರೇಂದ್ರ ಸೆಹ್ವಾಗ್ ಜತೆಗೆ ರೋಹಿತ್ ಸೇರ್ಪಡೆಗೊಂಡಿದ್ದಾರೆ.