ರಾಂಚಿ ಟೆಸ್ಟ್: ರೋಹಿತ್-ರಹಾನೆ ಶತಕದ ಜತೆಯಾಟ, ಭಾರತಕ್ಕೆ ಮೊದಲ ದಿನದ ಗೌರವ
ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಅಜಿಂಕ್ಯ ರಹಾನೆ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿದೆ. ಈ ಪಂದ್ಯದ ಕುರಿತಾದ ವರದಿ ಇಲ್ಲಿದೆ ನೋಡಿ...
ರಾಂಚಿ[ಅ.19]: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಇನ್ನೂ 32 ಓವರ್’ಗಳು ಬಾಕಿ ಇರುವಾಗಲೇ ಮಂದ ಬೆಳಕಿನಿಂದಾಗಿ ಪಂದ್ಯವನ್ನು ಮುಕ್ತಾಯಗೊಳಿಸಲಾಗಿದೆ. ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 224 ರನ್ ಬಾರಿಸಿದೆ.
ರಾಂಚಿ ಟೆಸ್ಟ್: ರೋಹಿತ್ ಶರ್ಮಾ ಸಿಡಿಲಬ್ಬರದ ಶತಕ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 12 ರನ್’ಗಳಿದ್ದಾಗ ಮಯಾಂಕ್ ಅಗರ್ವಾಲ್[10] ವಿಕೆಟ್ ಒಪ್ಪಿಸಿದರು. ರಬಾಡ ಆಫ್ರಿಕಾಗೆ ಮೊದಲ ಯಶಸ್ಸು ನೀಡಿದರು. ಇದರ ಬೆನ್ನಲ್ಲೇ ಚೇತೇಶ್ವರ್ ಪೂಜಾರ ಶೂನ್ಯ ಸುತ್ತಿದರು. ನಾಯಕ ಕೊಹ್ಲಿ[12] ಕೂಡಾ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ನಿಲ್ಲಲಿಲ್ಲ. ಈ ವೇಳೆಗೆ ಭಾರತ 39 ರನ್’ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ರಾಂಚಿ ಟೆಸ್ಟ್: ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ 71/3
ಆಸರೆಯಾದ ಮುಂಬೈಕರ್ಸ್: ತಂಡದ ಮೊತ್ತ 40 ರನ್’ಗಳಾಗುವುದರೊಳಗಾಗಿ ಮೂರು ವಿಕೆಟ್ ಕಳೆದುಕೊಂಡಾಗ ಹರಿಣಗಳ ಪಡೆ ಕುಣಿದು ಕುಪ್ಪಳಿಸಿತು. ಆದರೆ ನಾಲ್ಕನೇ ವಿಕೆಟ್’ಗೆ ರೋಹಿತ್ ಶರ್ಮಾ-ಅಜಿಂಕ್ಯ ರಹಾನೆ ಎಚ್ಚರಿಕೆಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಮುಂಬೈನ ಈ ಇಬ್ಬರು ಬ್ಯಾಟ್ಸ್’ಮನ್’ಗಳು ಮುರಿಯದ 185 ರನ್’ಗಳ ಜತೆಯಾಟ ನಿಭಾಯಿಸುವುದರೊಂದಿಗೆ ತಂಡವನ್ನು ಇನ್ನೂರರ ಗಡಿ ದಾಟಿಸಿತು. ರೋಹಿತ್ ಶರ್ಮಾ 164 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 117 ರನ್ ಬಾರಿಸಿದರು. ಇದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್’ನಲ್ಲಿ ಬಾರಿಸಿದ 6ನೇ ಹಾಗೂ ಈ ಸರಣಿಯಲ್ಲಿ ದಾಖಲಿಸಿದ ಮೂರನೇ ಟೆಸ್ಟ್ ಶತಕವಾಗಿದೆ. ಇನ್ನು ರೋಹಿತ್’ಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯ ರಹಾನೆ ಕೂಡಾ ಅಜೇಯ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ರಹಾನೆ 135 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 83 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ರಾಂಚಿ ಟೆಸ್ಟ್: ಸಿಕ್ಸರ್’ನಲ್ಲಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ
ರಬಾಡಗೆ 2 ವಿಕೆಟ್: ದಕ್ಷಿಣ ಆಫ್ರಿಕಾ ಪ್ರಮುಖ ವೇಗಿ ಆರಂಭದಲ್ಲೇ 2 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಶಾಕ್ ನೀಡಿದರು. ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಕಬಳಿಸುವ ಮೂಲಕ ಆತಿಥೇಯರ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಇದರ ಬೆನ್ನಲ್ಲೇ ಆ್ಯನ್ರಿಚ್ ನೋರ್ಜೆ ತಮ್ಮ ಚೊಚ್ಚಲ ಟೆಸ್ಟ್ ವಿಕೆಟ್ ರೂಪದಲ್ಲಿ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ನಿನ ಹಾದಿ ತೋರಿಸಿದರು.
ಸಂಕ್ಷಿಪ್ತ ಸ್ಕೋರ್:
ಭಾರತ: 224/3
ರೋಹಿತ್ ಶರ್ಮಾ: 117
ಅಜಿಂಕ್ಯ ರಹಾನೆ: 83
ಕಗಿಸೋ ರಬಾಡ: 54/2
[* ಮೊದಲ ದಿನದಾಟ ಮುಕ್ತಾಯದ ವೇಳೆಗೆ]