ರಾಂಚಿ ಟೆಸ್ಟ್[ಅ.20]: ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್’ನಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಸಂಭ್ರಮಿಸಿದ್ದಾರೆ. 249 ಎಸೆತಗಳಲ್ಲಿ ಹಿಟ್ ಮ್ಯಾನ್ ಸಿಕ್ಸರ್ ಮೂಲಕವೇ ಡಬಲ್ ಸೆಂಚುರಿ ತಮ್ಮ ಖಾತೆಗೆ ಸೇರಿಸಿಕೊಂಡರು. ಶತಕವನ್ನು ಸಿಕ್ಸರ್ ಮೂಲಕವೇ ಪೂರೈಸಿದ್ದ ರೋಹಿತ್ ಇದೀಗ ಚೊಚ್ಚಲ ದ್ವಿಶತಕವನ್ನು ಸಿಕ್ಸರ್ ಮೂಲಕವೇ ಪೂರೈಸಿದರು. ಇದರೊಂದಿಗೆ ಸಿಕ್ಸರ್ ಮೂಲಕ ದ್ವಿಶತಕ ಪೂರೈಸಿದ ಮೊದಲ ಭಾರತೀಯ  ಬ್ಯಾಟ್ಸ್’ಮನ್ ಎನ್ನುವ ದಾಖಲೆ ರೋಹಿತ್ ಪಾಲಾಗಿದೆ.

ರಾಂಚಿ ಟೆಸ್ಟ್: ರೋಹಿತ್ ಶರ್ಮಾ @199*

ಲಂಚ್ ಬ್ರೇಕ್’ಗೂ ಮುನ್ನ 199 ರನ್ ಬಾರಿಸಿದ್ದ ರೋಹಿತ್ ಲುಂಗಿಸಾನಿ ಎಂಗಿಡಿ ಹಾಕಿದ ಎರಡನೇ ಓವರ್’ನಲ್ಲೇ ಆಕರ್ಷಕ ಸಿಕ್ಸರ್ ಮೂಲಕ ದ್ವಿಶತಕ ಪೂರೈಸಿದರು. ರೋಹಿತ್ 254 ಎಸೆತಗಳಲ್ಲಿ 28 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 212 ರನ್ ಬಾರಿಸಿದರು. ಇದರ ಬೆನ್ನಲ್ಲೇ ಕಗಿಸೋ ರಬಾಡ ಎಸೆತದಲ್ಲಿ ಎಂಗಿಡಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ರಾಂಚಿ ಟೆಸ್ಟ್: ಶತಕ ಸಿಡಿಸಿ ವಿಕೆಟ್ ಒಪ್ಪಿಸಿದ ರಹಾನೆ

 ಈಗಾಗಲೇ ಏಕದಿನ ಕ್ರಿಕೆಟ್’ನಲ್ಲಿ ಮೂರು ದ್ವಿಶತಕ ಬಾರಿಸಿರುವ ರೋಹಿತ್ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್’ನಲ್ಲೂ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುತ್ತಿದ್ದ ರೋಹಿತ್ ನಿರೀಕ್ಷಿತ ಯಶಸ್ಸು ಲಭಿಸಿರಲಿಲ್ಲ. ಆದರೆ ಹರಿಣಗಳ ವಿರುದ್ಧ ಆರಂಭಿಕನಾಗಿ ಬಡ್ತಿಪಡೆದ ಬೆನ್ನಲ್ಲೇ ಭರ್ಜರಿ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು. ವೈಜಾಗ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್’ನಲ್ಲೂ ರೋಹಿತ್ ಶರ್ಮಾ ಆಕರ್ಷಕ ಶತಕ ಬಾರಿಸಿದ್ದರು. ಈ ಮೂಲಕ ಟೆಸ್ಟ್’ನಲ್ಲೂ ಆರಂಭಿಕನಾಗಿ ಯಶಸ್ವಿಯಾಗಬಲ್ಲೇ ಎನ್ನುವುದನ್ನು ಸಾಬೀತು ಮಾಡಿದ್ದರು. 

ಈ ಸರಣಿಯಲ್ಲೇ ಆರಂಭಿಕನಾಗಿ 500 ರನ್ ಬಾರಿಸಿರುವ ರೋಹಿತ್ ಈಗಾಗಲೇ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್, ಸರಣಿಯೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿರುವ ರೋಹಿತ್, ಹರಿಣಗಳ ವಿರುದ್ಧ ಟೆಸ್ಟ್ ಸರಣಿಯಲ್ಲಿ 500+ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ದಾಖಲೆಯೂ ರೋಹಿತ್ ಪಾಲಾಗಿದೆ.