ರಾಂಚಿ ಟೆಸ್ಟ್: ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ 71/3
ರಾಂಚಿ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದಿದೆ. ಲಂಚ್ ಬ್ರೇಕ್’ಗೂ ಮುನ್ನ ಆತಿಥೇಯರ ಮೂರು ವಿಕೆಟ್ ಕಬಳಿಸುವಲ್ಲಿ ಹರಿಣಗಳ ಪಡೆ ಯಶಸ್ವಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ರಾಂಚಿ[ಅ.19]: ದಕ್ಷಿಣ ಆಫ್ರಿಕಾ ವೇಗಿಗಳ ಮಾರಕ ದಾಳಿಯ ಹೊರತಾಗಿಯೂ ರೋಹಿತ್ ಶರ್ಮಾ ದಿಟ್ಟ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ದಿನದಾಟದ ಲಂಚ್ ಬ್ರೇಕ್ ವೇಳೆಗೆ 3 ವಿಕೆಟ್ ಕಳೆದುಕೊಂಡು 71 ರನ್ ಬಾರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಕಗಿಸೋ ಆರಂಭಿಕ ಆಘಾತ ನೀಡಿದರು. ಮಯಾಂಕ್ ಅಗರ್ವಾಲ್ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಚೇತೇಶ್ವರ್ ಪೂಜಾರ ಶೂನ್ಯ ಸುತ್ತಿ ಪೆವಿಲಿಯನ್ ಹಾದಿ ಹಿಡಿದರು. ಈ ಇಬ್ಬರನ್ನು ಪೆವಿಲಿಯನ್ನಿಗೆ ಅಟ್ಟುವಲ್ಲಿ ಕಗಿಸೋ ರಬಾಡ ಯಶಸ್ವಿಯಾದರು.
ಚೇತರಿಕೆ ನೀಡಲೆತ್ನಿಸಿದ ರೋಹಿತ್-ಕೊಹ್ಲಿ: ತಂಡದ ಮೊತ್ತ 16 ರನ್’ಗಳಾಗುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ವಿರಾಟ್ ಕೊಹ್ಲಿ ಜತೆ ರೋಹಿತ್ ಶರ್ಮಾ ತಂಡಕ್ಕೆ ಆಸರೆಯಾಗಲು ಯತ್ನಿಸಿದರು. 3ನೇ ವಿಕೆಟ್’ಗೆ ಈ ಜೋಡಿ 23 ರನ್’ಗಳ ಜತೆಯಾಟ ನಿಭಾಯಿಸಿತು. ಈ ವೇಳೆ ದಾಳಿಗಿಳಿದ ಆ್ಯನ್ರಿಚ್ ನೋರ್ಜೆ ತಮ್ಮ ಚೊಚ್ಚಲ ವಿಕೆಟ್ ರೂಪದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ರೋಹಿತ್-ಕೊಹ್ಲಿ ಜೋಡಿ ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಇದೀಗ ರೋಹಿತ್ ಶರ್ಮಾ 38 ಹಾಗೂ ಉಪನಾಯಕ ಅಜಿಂಕ್ಯ ರಹಾನೆ 11 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಭಾರತ: 71/3
ರೋಹಿತ್: 38
ರಬಾಡ: 15/2
[ಲಂಚ್ ಬ್ರೇಕ್ ವೇಳೆಗೆ]