ರಾಂಚಿ[ಅ.21]: ಜುಬೇರ್ ಹಮ್ಜಾ ಏಕಾಂಗಿ ಹೋರಾಟದ ಹೊರತಾಗಿಯೂ ಟೀಂ ಇಂಡಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 162 ರನ್’ಗಳಿಗೆ ಆಲೌಟ್ ಮಾಡಿದೆ. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್’ನಲ್ಲಿ 335 ರನ್’ಗಳ ಮುನ್ನಡೆ ಸಾಧಿಸಿದ್ದು, ಹರಿಣಗಳ ಪಡೆಯ ಮೇಲೆ ಫಾಲೋ ಆನ್ ಹೇರಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 9 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ, ಮೂರನೇ ದಿನದಾಟದ ಮೊದಲ ಓವರ್’ನಲ್ಲೇ ನಾಯಕ ಫಾಫ್ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡಿತು. ಆದರೆ ನಾಲ್ಕನೇ ವಿಕೆಟ್’ಗೆ ಜತೆಯಾದ ತೆಂಬ ಬವುಮಾ-ಜುಬೇರ್ ಹಮ್ಜಾ 91 ರನ್ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ಕೊನೆಗೂ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಸ್ಫೋಟಕ ಅರ್ಧಶತಕ ಬಾರಿಸಿದ ಹಮ್ಜಾ[62 ರನ್, 79 ಎಸೆತ] ಜಡೇಜಾ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ತೆಂಬ ಬವುಮಾ, ಶಾದಾಬ್ ನದೀಮ್ ಅವರಿಗೆ ಚೊಚ್ಚಲ ಬಲಿಯಾದರು. ಇದಾದ ಬಳಿಕ ಕ್ಲಾಸೆನ್[6], ಡೇನ್ ಪೀಟ್[4], ರಬಾಡ ಹೆಚ್ಚುಹೊತ್ತು ಕ್ರೀಸ್’ನಲ್ಲಿ ನಿಲ್ಲಲಿಲ್ಲ.

ನೆಲಕಚ್ಚಿ ಆಡಿದ ಲಿಂಡೆ: ಒಂದು ಹಂತದಲ್ಲಿ 130 ರನ್’ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಜಾರ್ಜ್ ಲಿಂಡೆ ಆಸರೆಯಾದರು. ಬೌಲಿಂಗ್’ನಲ್ಲಿ 4 ವಿಕೆಟ್ ಪಡೆದು ಗಮನ ಸೆಳೆದಿದ್ದ ಲಿಂಡೆ, ಬ್ಯಾಟಿಂಗ್’ನಲ್ಲಿ ಕೆಲಕಾಲ ಭಾರತೀಯ ಬೌಲರ್’ಗಳನ್ನು ಕಾಡಿದರು. ಒಟ್ಟು 81 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 37 ರನ್ ಬಾರಿಸಿ ಉಮೇಶ್ ಯಾದವ್’ಗೆ ಮೂರನೇ ಬಲಿಯಾದರು.   

ಬವುಮಾ, ಹಮ್ಜಾ ಹಾಗೂ ಲಿಂಡೆ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಭಾರತ ಪರ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಶಮಿ, ನದೀಮ್ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದರು.

ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ, ರೋಹಿತ್ ಶರ್ಮಾಆಕರ್ಷಕ ದ್ವಿಶತಕ ಹಾಗೂ ಅಜಿಂಕ್ಯ ರಹಾನೆ ಸಮಯೋಚಿತ ಶತಕದ ನೆರವಿನಿಂದ 497/9 ರನ್ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.