ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಈ ಒಪ್ಪಂದದ ಭಾಗವಾಗಿ ಜಡೇಜಾ ಮತ್ತು ಸ್ಯಾಮ್ ಕರ್ರನ್ ರಾಜಸ್ಥಾನ ತಂಡಕ್ಕೆ ಬರಲಿದ್ದು, ವಿದೇಶಿ ಆಟಗಾರರ ಕೋಟಾ ಮತ್ತು ಸಂಭಾವನೆಯ ಸಮಸ್ಯೆಯಿಂದಾಗಿ ರಾಯಲ್ಸ್‌ಗೆ ವರ್ಗಾವಣೆ ಪ್ರಕ್ರಿಯೆ ಕಷ್ಟಕರವಾಗಿದೆ.

ಜೈಪುರ: ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಆಟಗಾರರ ವರ್ಗಾವಣೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರ್ರನ್‌ರನ್ನು ರಾಜಸ್ಥಾನ ರಾಯಲ್ಸ್‌ಗೆ ನೀಡಿ ಸಂಜು ಅವರನ್ನು ಪಡೆಯಲು ಚೆನ್ನೈ ಮುಂದಾಗಿದೆ. ಜಡೇಜಾ, ಸ್ಯಾಮ್ ಕರ್ರನ್‌ರಿಂದ ಚೆನ್ನೈ ಮತ್ತು ಸಂಜುನಿಂದ ರಾಜಸ್ಥಾನ ತಂಡ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿವೆ. ಬಿಸಿಸಿಐ ಮತ್ತು ಇಸಿಬಿ ಮಂಡಳಿಗಳ ಅನುಮತಿಯೊಂದಿಗೆ ಆಟಗಾರರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಸ್ಯಾಮ್ ಕರ್ರನ್ ತಂಡಕ್ಕೆ ಸೇರಿಸಿಕೊಳ್ಳಲು ರಾಯಲ್ಸ್‌ಗೆ ಸಂಕಷ್ಟ

ಆದರೆ ರಾಜಸ್ಥಾನ ತಂಡಕ್ಕೆ ಈಗಲೂ ಒಂದು ಸಂಕಷ್ಟ ಎದುರಾಗಿದೆ. ಅವರಿಗೆ ಸ್ಯಾಮ್ ಕರ್ರನ್‌ರನ್ನು ತಂಡದಲ್ಲಿ ಸೇರಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಿದೆ. ಇದಕ್ಕೆ ಕಾರಣ ಓವರ್‌ಸೀಸ್ ಕೋಟಾ ಸಮಸ್ಯೆಯಿಂದಾಗಿ, ವಿದೇಶಿ ಆಟಗಾರನ ಒಪ್ಪಂದವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ವಿದೇಶಿ ಆಟಗಾರರಲ್ಲಿ ಒಬ್ಬರನ್ನು ಕೈಬಿಡದೆ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರ್ರನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ್‌ಗೆ ಸಾಧ್ಯವಿಲ್ಲ. ಒಂದು ಫ್ರಾಂಚೈಸಿಯು ತಂಡದಲ್ಲಿ ಗರಿಷ್ಠ ಎಂಟು ವಿದೇಶಿ ಆಟಗಾರರನ್ನು ಹೊಂದಲು ಅವಕಾಶವಿದೆ. ಆದರೆ ಸದ್ಯ ರಾಜಸ್ಥಾನ ರಾಯಲ್ಸ್‌ನಲ್ಲಿ ಶಿಮ್ರೊನ್ ಹೆಟ್ಮೇಯರ್, ಜೋಫ್ರಾ ಆರ್ಚರ್, ತೀಕ್ಷಣ, ಹಸರಂಗ ಸೇರಿದಂತೆ 8 ವಿದೇಶಿ ಆಟಗಾರರು ತಂಡದಲ್ಲಿದ್ದಾರೆ. ಹೀಗಾಗಿ ಈ ಪೈಕಿ ಯಾರನ್ನಾದರೂ ತಂಡದಿಂದ ರಿಲೀಸ್ ಮಾಡಿದರಷ್ಟೇ ಸ್ಯಾಮ್ ಕರ್ರನ್ ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಳ್ಳಲು ಸಾಧ್ಯವಾಗುತ್ತದೆ.

ಇದಷ್ಟೇ ಅಲ್ಲದೇ ಸ್ಯಾಮ್ ಕರ್ರನ್‌ ಅವರ ಸಂಭಾವನೆಯೂ ಒಪ್ಪಂದಕ್ಕೆ ಅಡ್ಡಿಯಾಗಿದೆ. ಚೆನ್ನೈನಲ್ಲಿ ಕರ್ರನ್‌ ಅವರ ಸಂಭಾವನೆ 2.4 ಕೋಟಿ ರೂಪಾಯಿ. ರಾಜಸ್ಥಾನ ಬಳಿ ಹರಾಜಿನಲ್ಲಿ ಕೇವಲ 30 ಲಕ್ಷ ರೂಪಾಯಿ ಮಾತ್ರ ಉಳಿದಿದೆ. ತಂಡದ ದುಬಾರಿ ಆಟಗಾರರನ್ನು ಮಾರಾಟ ಮಾಡಿದರೆ ಮಾತ್ರ ರಾಜಸ್ಥಾನ್‌ಗೆ ಜಡೇಜಾ ಮತ್ತು ಸ್ಯಾಮ್ ಕರ್ರನ್‌ರನ್ನು ಪಡೆಯಲು ಸಾಧ್ಯ.

ರಾಜಸ್ಥಾನ ರಾಯಲ್ಸ್‌ಗೆ ಶುರುವಾಗಿದೆ ಹೊಸ ತಲೆನೋವು

ಯಾರನ್ನು ಕೈಬಿಡಬೇಕು ಎಂಬುದು ರಾಜಸ್ಥಾನ ತಂಡಕ್ಕೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಹೀಶ್ ತೀಕ್ಷಣ ಅವರನ್ನು ಕೈಬಿಡಲಾಗುವುದು ಎಂದು ಈ ಹಿಂದೆ ವರದಿಗಳಿದ್ದವು. ಆದರೆ ಅವರನ್ನು ಮಾತ್ರ ಕೈಬಿಟ್ಟರೆ ಕೆಲಸ ಆಗುವುದಿಲ್ಲ. ಹೆಚ್ಚು ಸಂಭಾವನೆ ಇರುವ ಮತ್ತೊಬ್ಬ ಆಟಗಾರನನ್ನು ರಾಜಸ್ಥಾನ ಕೈಬಿಡಬೇಕಾಗುತ್ತದೆ. ಕರನ್‌ರನ್ನು ಕರೆತರಲು ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ ಅವರನ್ನೂ ರಾಜಸ್ಥಾನ ಕೈಬಿಡುವ ಸಾಧ್ಯತೆಯಿದೆ. ಈ ಬಗ್ಗೆ ಒಪ್ಪಂದವಾಗಿದೆ ಎಂದು ಮಾಹಿತಿ ಹೊರಬಿದ್ದಿದೆ.

ಇದೇ ವೇಳೆ, ಸಂಜು ಅವರ 31ನೇ ಹುಟ್ಟುಹಬ್ಬಕ್ಕೆ ಶುಭ ಕೋರಿ ಚೆನ್ನೈ ಸೂಪರ್ ಕಿಂಗ್ಸ್ ಬೆಳಿಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ವಿಸಿಲ್ ಪೋಡು ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡಿದ್ದು, ಸಂಜು ಚೆನ್ನೈ ತಂಡಕ್ಕೆ ಸೇರುತ್ತಾರೆ ಎಂಬ ಸೂಚನೆಯಾಗಿ ಅಭಿಮಾನಿಗಳು ಇದನ್ನು ಸ್ವೀಕರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳೂ ಸಂಜುಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿವೆ.

ಈ ತಿಂಗಳ 15 ರೊಳಗೆ ಆಟಗಾರರ ಹರಾಜಿಗೂ ಮುನ್ನ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ತಂಡಗಳು ನಿರ್ಧಾರ ತೆಗೆದುಕೊಳ್ಳಬೇಕು. ಇದಕ್ಕೂ ಮುನ್ನ ಸಂಜು ಅವರ ತಂಡ ಬದಲಾವಣೆಯನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ.