ನವದೆಹಲಿ(ಮೇ.08): ಐಪಿಎಲ್‌ 14ನೇ ಆವೃತ್ತಿ ದಿಢೀರನೆ ಮುಂದೂಡಿಕೆಯಾಗಿರಬಹುದು. ಆದರೆ ಟೂರ್ನಿ ಅರ್ಧ ಭಾಗ ನಡೆದಿದ್ದರಿಂದ ಸೌರಾಷ್ಟ್ರದ ಯುವ ವೇಗಿ ಚೇತನ್‌ ಸಕಾರಿಯಾಗೆ ತನ್ನ ತಂದೆಯ ಜೀವ ಉಳಿಸಲು ಸಾಧ್ಯವಾಯಿತು. ರಾಜಸ್ಥಾನ ರಾಯಲ್ಸ್‌ ತಂಡ ಚೇತನ್‌ರನ್ನು 1.2 ಕೋಟಿ ರು. ನೀಡಿ ಖರೀದಿಸಿತ್ತು. ಹೀಗಾಗಿ, ಕೆಲ ದಿನಗಳ ಹಿಂದೆ ಒಂದು ಕಂತಿನ ವೇತನವನ್ನು ತಂಡ ಆಟಗಾರರಿಗೆ ಪಾವತಿಸಿತ್ತು. ಈ ಹಣವನ್ನು ಚೇತನ್‌ ಕೋವಿಡ್‌ನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಂದೆಯ ಜೀವ ಉಳಿಸಲು ಬಳಸಿದ್ದಾರೆ.

‘ಕಳೆದ ವಾರ ನಮ್ಮ ತಂದೆಗೆ ಸೋಂಕು ತಗುಲಿತ್ತು. ನನಗೆ ವೇತನ ಸಿಕ್ಕಿದ್ದರಿಂದ ತಕ್ಷಣ ಅದನ್ನು ಆಸ್ಪತ್ರೆಗೆ ಕಟ್ಟಿದೆ. ಕುಟುಂಬದಲ್ಲಿ ನಾನೊಬ್ಬನೇ ದುಡಿಯುತ್ತಿರುವುದು. ಅದು ಕ್ರಿಕೆಟ್‌ ಮೂಲಕವೇ. ನನ್ನ ತಂದೆ ಟೆಂಪೋ ಓಡಿಸುತ್ತಿದ್ದರು. ಈಗ ಮನೆಯಲ್ಲೇ ಇದ್ದಾರೆ. ತಾಯಿಗೆ ಒಂದು ಕೋಟಿಯಲ್ಲಿ ಎಷ್ಟುಸೊನ್ನೆಗಳಿವೆ ಎಂದು ಎಣಿಸಲು ಸಹ ಗೊತ್ತಿಲ್ಲ. ಈ ಸಂಕಷ್ಟದ ಸಮಯದಲ್ಲಿ ಐಪಿಎಲ್‌ ಯಾಕೆ ನಡೆಸಬೇಕಿತ್ತು ಎಂದು ಹಲವರು ಪ್ರಶ್ನಿಸಿದ್ದರು. ಆದರೆ ನನ್ನ ಪಾಲಿಗೆ ಐಪಿಎಲ್‌ ವರದಾನವಾಯಿತು’ ಎಂದು ಸಕಾರಿಯಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಇನ್ನುಳಿದ ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ನೀಡಲು ಒಲವು ತೋರಿದ ಶ್ರೀಲಂಕಾ

ಬಾಕಿ ಇರುವ ಪಂದ್ಯಗಳು ಮುಂದಿನ ದಿನಗಳಲ್ಲಿ ನಡೆದು ತಮ್ಮ ಪೂರ್ಣ ವೇತನ ದೊರೆತರೆ ಕುಟುಂಬಕ್ಕಾಗಿ ಒಂದು ಮನೆ ಕಟ್ಟುವ ಆಸೆ ಹೊಂದಿರುವುದಾಗಿ ಚೇತನ್‌ ಹೇಳಿಕೊಂಡಿದ್ದಾರೆ. ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೇ ಸೌರಾಷ್ಟ್ರ ಮೂಲದ ಎಡಗೈ ವೇಗಿ ಚೇತನ್ ಸಕಾರಿಯಾ ರಾಜಸ್ಥಾನ ರಾಯಲ್ಸ್‌ ಪರ 7 ವಿಕೆಟ್ ಕಬಳಿಸುವ ಮೂಲಕ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ.