ಟೀಂ ಇಂಡಿಯಾ ಮಾಜಿ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ಇಂಗ್ಲೆಂಡ್ ತಂಡದ ನೂತನ ಹೆಡ್ ಕೋಚ್ ಆಗುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಇಂಗ್ಲೆಂಡ್‌ ಏಕದಿನ, ಟಿ20 ತಂಡಕ್ಕೆ ಕೋಚ್‌ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಬ್ರೆಂಡನ್‌ ಮೆಕಲಂ ಕೋಚ್‌ ಆಗಿದ್ದಾರೆ. ಆದರೆ ಏಕದಿನ, ಟಿ20 ತಂಡದ ಕೋಚ್‌ ಹುದ್ದೆ ಖಾಲಿಯಿದೆ. ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ಇಂಗ್ಲೆಂಡ್‌ ಮಾಜಿ ನಾಯಕ ಇಯಾನ್‌ ಮೊರ್ಗನ್‌, ‘ಕೋಚ್‌ ಸ್ಥಾನಕ್ಕೆ ದ್ರಾವಿಡ್‌, ಪಾಂಟಿಂಗ್‌, ಸ್ಟೀಫನ್‌ ಫ್ಲೆಮಿಂಗ್ ಉತ್ತಮ ಆಯ್ಕೆ. ತಂಡಕ್ಕೆ ಸೂಕ್ತ ವ್ಯಕ್ತಿಯನ್ನೇ ಕೋಚ್‌ ಆಗಿ ನೇಮಿಸಬೇಕು’ ಎಂದಿದ್ದಾರೆ.

ಒಲಿಂಪಿಕ್ಸ್‌ ಹಾಕಿ: ಕ್ವಾರ್ಟರ್‌ನಲ್ಲಿ ಭಾರತಕ್ಕಿಂದು ಬಲಿಷ್ಠ ಬ್ರಿಟನ್‌ ಸವಾಲು

ದ್ರಾವಿಡ್‌ ಟಿ20 ವಿಶ್ವಕಪ್‌ ಬಳಿಕ ಭಾರತ ತಂಡ ಕೋಚ್‌ ಸ್ಥಾನದಿಂದ ಕೆಳಗಿಳಿದಿದ್ದರು. ಅವರು ಐಪಿಎಲ್‌ನ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಕೋಚ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಇಂಗ್ಲೆಂಡ್‌ ತಂಡದ ಕೋಚ್‌ ಸ್ಥಾನಕ್ಕೆ ಅವರ ಹೆಸರು ಕೇಳಿ ಬಂದಿದ್ದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಭಾರತ ಕ್ರಿಕೆಟ್ ತಂಡವು ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿತ್ತು. ಆದರೆ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್, ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿದ್ದರಿಂದ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು. ಇದೀಗ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.