ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಸೋಲಿನ ಬೆನ್ನಲ್ಲೇ, ಈ ಹಿಂದೆ ತಾನು ಪಂಜಾಬ್ ತಂಡವನ್ನು ಸೇರಲು ಇಷ್ಟಪಡುವುದಿಲ್ಲ ಎಂದು ಲಖನೌ ನಾಯಕ ರಿಷಭ್ ಪಂತ್ ನೀಡಿದ್ದ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 19ನೇ ಸೀಸನ್‌ನಲ್ಲಿ ಅಜೇಯವಾಗಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ನಿನ್ನೆ ಮುಲ್ಲಾನ್‌ಪುರದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 54 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇನ್ನು ಪಂಜಾಬ್ ಎದುರು ಲಖನೌ ಸೋಲು ಅನುಭವಿಸಿದ ಬೆನ್ನಲ್ಲೇ ಲಖನೌ ತಂಡದ ನಾಯಕ ರಿಷಭ್ ಪಂತ್ ಈ ಹಿಂದೆ ಪಂಜಾಬ್ ತಂಡದ ಬಗ್ಗೆ ಆಡಿದ್ದ ಮಾತು ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲೇ ಪ್ರಭ್‌ಸಿಮ್ರನ್‌ ಸಿಂಗ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಇದಾದ ಬಳಿಕ ಪ್ರಿಯಾನ್ಶ್‌ ಶರ್ಮಾ(93) ಹಾಗೂ ಕೂಪರ್ ಕಾನೊಲಿ(87) ವಿಸ್ಪೋಟಕ ಅರ್ಧಶತಕಗಳ ನೆರವಿನಿಂದ 182 ರನ್‌ಗಳ ಬೃಹತ್ ಜತೆಯಾಟವಾಡಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇನ್ನು ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್‌ ತಂಡವು ಸಾಕಷ್ಟು ಪ್ರತಿರೋಧ ತೋರಿತಾದರೂ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಲಖನೌ ತಂಡವು 54 ರನ್‌ಗಳ ಸೋಲೊಪ್ಪಿಕೊಂಡಿತು.

ಇನ್ನು ಪಂದ್ಯ ಮುಕ್ತಾಯದ ಬಳಿಕ ಲಖನೌ ತಂಡದ ನಾಯಕ ರಿಷಭ್ ಪಂತ್, ಪಂಜಾಬ್ ತಂಡದ ಪ್ರದರ್ಶನವನ್ನು ಕೊಂಡಾಡಿದ್ದಾರೆ. 'ನಮ್ಮ ತಂಡದ ಮೇಲೆ ನಮಗೆ ವಿಶ್ವಾಸವಿದೆ. ಆದರೆ ಇದೇ ವೇಳೆ ಎದುರಾಳಿ ತಂಡವು ಚೆನ್ನಾಗಿ ಆಡಿದೆ. ಪಂಜಾಬ್ ತಂಡವು ಆಡಿದ ರೀತಿಯನ್ನು ನೋಡಿದಾಗ ಒಳ್ಳೆಯ ಕ್ರಿಕೆಟ್ ಆಡಿದ ಅವರಿಗೂ ಕ್ರೆಡಿಟ್ ಸಲ್ಲಲೇಬೇಕು ಎಂದು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯ ಅತ್ಯುತ್ತಮ ತಂಡಗಳಲ್ಲಿ ಒಂದು ಎಂದು ಹೇಳಿದ್ದಾರೆ.

Scroll to load tweet…

ರಿಷಭ್ ಪಂತ್ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಬಗ್ಗೆ ಆಡಿದ ಮಾತುಗಳು ವೈರಲ್

ಇನ್ನು ಇದರ ಬೆನ್ನಲ್ಲೇ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಬಗ್ಗೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಆಡಿರುವ ಮಾತುಗಳು ಇದೀಗ ವೈರಲ್ ಆಗಿವೆ. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 27 ಕೋಟಿ ರುಪಾಯಿ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಆ ಸಂದರ್ಭದಲ್ಲಿ ರಿಷಭ್ ಪಂತ್ ತಮಗೆ ಪಂಜಾಬ್ ಕಿಂಗ್ಸ್ ತಂಡ ಸೇರಲು ಇಷ್ಟವಿರಲಿಲ್ಲ ಎಂದಿದ್ದರು..

'ನಾನು ಯಾವುದಾದರೂ ಒಂದು ತಂಡವನ್ನು ಕೂಡಿಕೊಳ್ಳಲು ಬಯಸುವುದಿಲ್ಲ ಎಂದಾದರೇ ಅದು ಪಂಜಾಬ್ ಕಿಂಗ್ಸ್. ನನಗೆ ತುಂಬಾ ಭಯವಿತ್ತು, ಯಾಕೆಂದರೆ ಅವರ ಪರ್ಸ್‌ನಲ್ಲಿ ಹರಾಜಿಗೆ ಸಾಕಷ್ಟು ಹಣವಿತ್ತು. ಆದರೆ ಅವರು ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸುತ್ತಿದ್ದಂತೆಯೇ ನಾನು ನಿರಾಳವಾದೆ. ಆಗ ಅವರು ನನ್ನನ್ನು ಖರೀದಿಸುವುದಿಲ್ಲ ಎನ್ನುವುದು ಅರ್ಥವಾಯಿತು ಎಂದು ಹೇಳಿದ್ದರು.

Scroll to load tweet…

ಕರ್ಮ್ ರಿಟರ್ನ್ಸ್‌:

ರಿಷಭ್ ಪಂತ್ ಯಾವ ತಂಡವನ್ನು ಸೇರಲು ಇಷ್ಟವಿಲ್ಲ ಎಂದಿದ್ದರೋ ಅದೇ ತಂಡ 2025ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿ, ಕೂದಲೆಳೆ ಅಂತರದಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. ಇದೀಗ 2026ರ ಐಪಿಎಲ್ ಟೂರ್ನಿಯಲ್ಲೂ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಅದ್ಭುತ ಪ್ರದರ್ಶನ ತೋರುತ್ತಿದ್ದು, ಇದುವರೆಗೂ ಆಡಿದ ಆರು ಪಂದ್ಯಗಳಲ್ಲಿ ಒಂದೂ ಪಂದ್ಯ ಸೋಲದೇ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಇನ್ನೊಂದೆಡೆ ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಆಡಿದ ಆರು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಹಾಗೂ 4 ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.