ಕೂಪರ್ ಕೊನೊಲಿ ಅವರ ಅಜೇಯ ಅರ್ಧಶತಕ ಮತ್ತು ವೈಶಾಕ್ ವಿಜಯ್‌ಕುಮಾರ್ ಅವರ ಮಾರಕ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. 163 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್, ಕೊನೊಲಿ ಅವರ 72 ರನ್‌ಗಳ ಏಕಾಂಗಿ ಹೋರಾಟದಿಂದಾಗಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

ಮುಲ್ಲಾನ್‌ಪುರ: ಕೂಪರ್ ಕೊನೊಲಿ ಅಜೇಯ ಅರ್ಧಶತಕ ಹಾಗೂ ವೇಗಿ ವೈಶಾಕ್ ವಿಜಯ್‌ಕುಮಾರ್ ಮಾರಕ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ಎದುರು ಪಂಜಾಬ್ ಕಿಂಗ್ಸ್ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಪಡೆ ಶುಭಾರಂಭ ಮಾಡಿದೆ.

ಗೆಲ್ಲಲು 163 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ತಂಡವು ಆರಂಭದಲ್ಲೇ ಪ್ರಿಯಾನ್ಶ್‌ ಆರ್ಯಾ(7) ಬಲಿ ಪಡೆಯುವ ಮೂಲಕ ರಬಾಡ, ಗುಜರಾತ್‌ಗೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಎರಡನೇ ವಿಕೆಟ್‌ಗೆ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಕೂಪರ್ ಕಾನೊಲಿ 76 ರನ್‌ಗಳ ಜತೆಯಾಟವಾಡಿದರು. ಪ್ರಭ್‌ಸಿಮ್ರನ್ ಸಿಂಗ್ 37 ರನ್ ಸಿಡಿಸಿ ರಶೀದ್‌ ಖಾನ್‌ಗೆ ವಿಕೆಟ್ ಒಪ್ಪಿಸಿದರು

ಕೂಪರ್ ಕಾನೂಲಿ ಏಕಾಂಗಿ ಹೋರಾಟ:

ಪ್ರಭ್‌ಸಿಮ್ರನ್ ಸಿಂಗ್ ವಿಕೆಟ್ ಪತನದ ಬಳಿಕ ಶ್ರೇಯಸ್ ಅಯ್ಯರ್ ಹಾಗೂ ಕೂಪರ್ ಕಾನೊಲಿ 27 ರನ್‌ಗಳ ಜತೆಯಾಟವಾಡಿದರು. ಅಯ್ಯರ್(18) ವಿಕೆಟ್ ಪತನವಾಗುತ್ತಿದ್ದಂತೆಯೇ ಪಂಜಾಬ್ ನಾಟಕೀಯ ಕುಸಿತ ಕಂಡಿತು. ನೆಹಾಲ್ ವದೇರಾ(3), ಶಶಾಂಕ್ ಸಿಂಗ್(4), ಮಾರ್ಕಸ್ ಸ್ಟೋನಿಸ್(0) ಹಾಗೂ ಮಾರ್ಕೊ ಯಾನ್ಸನ್(9) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೂಪರ್ ಕಾನೊಲಿ 44 ಎಸೆತಗಳಲ್ಲಿ ತಲಾ ಐದು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ ಅಜೇಯ 72 ರನ್ ಸಿಡಿಸುವ ಮೂಲಕ ತಂಡವನ್ನು ಇನ್ನು ಐದು ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು.

ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಗುಜರಾತ್ ಟೈಟಾನ್ಸ್

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲೇ ಸಾಯಿ ಸುದರ್ಶನ್(13) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ಶುಭ್‌ಮನ್ ಗಿಲ್ ಹಾಗೂ ಜೋಸ್ ಬಟ್ಲರ್ 46 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಗಿಲ್ 39 ರನ್ ಹಾಗೂ ಜೋಸ್ ಬಟ್ಲರ್ 38 ರನ್ ಬಾರಿಸಿ ಯುಜುವೇಂದ್ರ ಚಹಲ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನುಳಿದಂತೆ ಗ್ಲೆನ್ ಫಿಲಿಫ್ಸ್(25), ವಾಷಿಂಗ್ಟನ್ ಸುಂದರ್(18), ಶಾರುಕ್ ಖಾನ್‌ಗೆ(4) ಕನ್ನಡಿಗ ವೈಶಾಕ್ ವಿಜಯ್‌ಕುಮಾರ್ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ರಾಹುಲ್ ತೆವಾಟಿಯಾ 11 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.