* ಪಂಜಾಬ್ ಕಿಂಗ್ಸ್ ತಂಡಕ್ಕೆ ನೂತನ ಹೆಡ್ ಕೋಚ್ ನೇಮಕ* ಅನಿಲ್ ಕುಂಬ್ಳೆ ಸ್ಥಾನ ತುಂಬಲಿರುವ ಟ್ರೆವರ್ ಬೇಲಿಸ್‌* ಟ್ರೆವರ್ ಬೇಲಿಸ್‌, ಆಸ್ಟ್ರೇಲಿಯಾ ಮೂಲದ ಕೋಚ್

ನವದೆಹಲಿ(ಸೆ.16): ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಇದೀಗ ತನ್ನ ತಂಡದ ನೂತನ ಹೆಡ್‌ ಕೋಚ್ ಆಗಿ ಟ್ರೆವರ್ ಬೇಲಿಸ್‌ ಅವರನ್ನು ನೇಮಕ ಮಾಡಿಕೊಂಡಿದೆ. ಮುಂದಿನ ಆವೃತ್ತಿಯ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಟ್ರೆವರ್ ಬೇಲಿಸ್‌, ಪಂಜಾಬ್ ಕಿಂಗ್ಸ್‌ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 

ಈ ಮೊದಲು ಕನ್ನಡಿಗ ಅನಿಲ್ ಕುಂಬ್ಳೆ, ಪಂಜಾಬ್ ಕಿಂಗ್ಸ್‌ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಕುಂಬ್ಳೆ ಮಾರ್ಗದರ್ಶನದಲ್ಲಿ ಪಂಜಾಬ್ ಕಿಂಗ್ಸ್‌ ತಂಡವು ಪ್ಲೇ ಆಫ್‌ಗೇರದ ಹಿನ್ನೆಲೆಯಲ್ಲಿ ಅವರ ಬದಲಿಗೆ ಇದೀಗ ಏಕದಿನ ವಿಶ್ವಕಪ್ ಹಾಗೂ ಐಪಿಎಲ್‌ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಕೋಚ್‌ಗೆ ಪಂಜಾಬ್ ಕಿಂಗ್ಸ್‌ ಮಣೆ ಹಾಕಿದೆ. ಟ್ರೆವರ್ ಬೇಲಿಸ್‌ ಮಾರ್ಗದರ್ಶನದಲ್ಲಿ 2019ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಇದಕ್ಕೂ ಮೊದಲು ಟ್ರೆವರ್ ಬೇಲಿಸ್‌, ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೆಡ್‌ ಕೋಚ್ ಆಗಿದ್ದಾಗ ಕೆಕೆಆರ್ ತಂಡವು 2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲೂ ಟ್ರೆವರ್ ಬೇಲಿಸ್‌ ಕೋಚ್ ಆಗಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಟ್ರೆವರ್ ಬೇಲಿಸ್‌ 2020 ಹಾಗೂ 2021ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಹೆಡ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

2021ರ ಐಪಿಎಲ್ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಟ್ರೆವರ್ ಬೇಲಿಸ್‌ ಅವರನ್ನು ಕೋಚ್ ಹುದ್ದೆಯಿಂದ ಬಿಡುಗಡೆ ಮಾಡಿ, ಬ್ರಿಯಾನ್ ಲಾರಾಗೆ ಹೆಡ್‌ ಕೋಚ್ ಹುದ್ದೆ ನೀಡಿದೆ. ಇದೀಗ ಪಂಜಾಬ್ ಕಿಂಗ್ಸ್‌ ತಂಡದ ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಮಾತನಾಡಿದ ಟ್ರೆವರ್ ಬೇಲಿಸ್, ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ಆಟಗಾರರ ಜತೆ ಕೆಲಸ ಮಾಡಲು ತಾವು ಉತ್ಸುಕರಾಗಿರುವುದಾಗಿ 59 ವರ್ಷದ ಬೇಲಿಸ್ ತಿಳಿಸಿದ್ದಾರೆ.

Scroll to load tweet…

ಪಂಜಾಬ್ ಕಿಂಗ್ಸ್‌ ತಂಡವು 2014ರಲ್ಲಿ ಐಪಿಎಲ್ ಫೈನಲ್ ಪ್ರವೇಶಿಸಿತ್ತಾದರೂ, ಕೊನೆಯ ಕ್ಷಣದಲ್ಲಿ ಮುಗ್ಗರಿಸುವ ಮೂಲಕ ಪ್ಲೇ ಆಫ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದಾದ ಬಳಿಕ ಪಂಜಾಬ್‌ ತಂಡವು ಐಪಿಎಲ್‌ನಲ್ಲಿ ಒಮ್ಮೆಯೂ ಪ್ಲೇ ಆಫ್‌ ಹಂತಕ್ಕೇರಲು ವಿಫಲವಾಗಿತ್ತು. ಇನ್ನು ಅನಿಲ್ ಕುಂಬ್ಳೆ 2020ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದರು. 2020,2021 ಹಾಗೂ 2022ರಲ್ಲಿ ಕೂಡಾ ಪಂಜಾಬ್ ಕಿಂಗ್ಸ್‌ ತಂಡವು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಪಂಜಾಬ್ ಕಿಂಗ್ಸ್ ತಂಡವು 42 ಐಪಿಎಲ್ ಪಂದ್ಯಗಳನ್ನಾಡಿ ಕೇವಲ 19 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಲು ಯಶಸ್ವಿಯಾಗಿತ್ತು.

5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ಗೆ ಮಾರ್ಕ್ ಬೌಷರ್‌ ನೂತನ ಹೆಡ್ ಕೋಚ್..!

ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು, ದಕ್ಷಿಣ ಆಫ್ರಿಕಾ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾರ್ಯ ನಿರ್ವಹಿಸಿದ್ದ ಮಾರ್ಕ್ ಬೌಷರ್ ಅವರನ್ನು ತನ್ನ ತಂಡದ ಹೆಡ್‌ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಮಹೆಲಾ ಜಯವರ್ಧನೆ ಅವರಿಂದ ತೆರವಾದ ಸ್ಥಾನವನ್ನು ಮಾರ್ಕ್ ಬೌಷರ್‌ ತುಂಬಲಿದ್ದಾರೆ.