* ಮುಂಬೈ ಇಂಡಿಯನ್ಸ್ ತಂಡಕ್ಕೆ ನೂತನ ಹೆಡ್ ಕೋಚ್ ನೇಮಕ* ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಮಾರ್ಕ್ ಬೌಷರ್, ಮುಂಬೈ ಇಂಡಿಯನ್ಸ್ ನೂತನ ಹೆಡ್ ಕೋಚ್* ಮಹೆಲಾ ಜಯವರ್ಧನೆ ಅವರಿಂದ ತೆರವಾದ ಸ್ಥಾನ ತುಂಬಲಿರುವ ಮಾರ್ಕ್ ಬೌಷರ್
ಮುಂಬೈ(ಸೆ.16): ಮುಂಬರುವ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಾರ್ಕ್ ಬೌಷರ್, ಐಪಿಎಲ್‌ನ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಈ ವಿಚಾರವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಖಚಿತಪಡಿಸಿದೆ. ಈ ಮೊದಲಿ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮಹೆಲಾ ಜಯವರ್ಧನೆ, ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕೆಲ ದಿನಗಳ ಹಿಂದಷ್ಟೇ ಮಹೆಲಾ ಜಯವರ್ಧನೆ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು, ತನ್ನ ಜಾಗತಿಕ ಹೆಡ್ ಆಗಿ ನೇಮಕ ಮಾಡಿತ್ತು. ಟೀಂ ಇಂಡಿಯಾ ಅನುಭವಿ ವೇಗಿ ಜಹೀರ್ ಖಾನ್ ಅವರನ್ನು ಡೈರೆಕ್ಟರ್ ಆಫ್ ಕ್ರಿಕೆಟ್ ಆಫರೇಷನ್ ಜವಾಬ್ದಾರಿಯನ್ನು ನೀಡಿತ್ತು. ಹೀಗಾಗಿ ಜಹೀರ್ ಖಾನ್, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ[ ಗ್ಲೋಬಲ್ ಹೆಡ್ ಆಫ್ ಕ್ರಿಕೆಟ್ ಡೆವಲಪ್‌ಮೆಂಟ್ ಹೊಣೆ ಹೊತ್ತಿದ್ದಾರೆ. ಈ ಇಬ್ಬರು ದಿಗ್ಗಜ ಆಟಗಾರರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಜಾಗತಿಕ ಮಟ್ಟದಲ್ಲಿ ತನ್ನ ಹೆಜ್ಜೆಗುರುತು ಮೂಡುವಂತೆ ಮಾಡಲು ಸಹಕಾರಿಯಾಗಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತಿಳಿಸಿತ್ತು.
ಸದ್ಯ ಮಾರ್ಕ್ ಬೌಷರ್, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾರ್ಕ್ ಬೌಷರ್, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ತಮ್ಮ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಕಳೆದ ವಾರವಷ್ಟೇ ಖಚಿತ ಪಡಿಸಿತ್ತು.
ಮಾರ್ಕ್ ಬೌಷರ್, ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಂಡಂತಹ ದಿಗ್ಗಜ ವಿಕೆಟ್ ಕೀಪರ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಬ್ಯಾಟರ್ ಆಗಿ ಹಾಗೂ ವಿಕೆಟ್ ಕೀಪರ್ ಆಗಿ ಮಾರ್ಕ್ ಬೌಷರ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆ ಮಾರ್ಕ್ ಬೌಷರ್ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಬಳಿಕ ಮಾರ್ಕ್ ಬೌಷರ್, ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ಫ್ರಾಂಚೈಸಿ ತಂಡವಾದ ಟೈಟಾನ್ಸ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ ವಹಿಸಿದ್ದರು.
Mumbai Indians ಕೇಪ್‌ಟೌನ್ ತಂಡಕ್ಕೆ ಕೋಚಿಂಗ್ ಸ್ಟಾಪ್ ನೇಮಕ, ಕ್ಯಾಟಿಚ್, ಆಮ್ಲಾಗೆ ಮಹತ್ವದ ಜವಾಬ್ದಾರಿ!
ಇನ್ನು 2019ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು, ಮಾರ್ಷ್ ಬೌಷರ್ ಅವರನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಹೆಡ್ ಕೋಚ್ ಆಗಿ ನೇಮಕ ಮಾಡಿತ್ತು, ಮಾರ್ಕ್ ಬೌಷರ್ ಮಾರ್ಗದರ್ಶನದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 11 ಟೆಸ್ಟ್, 12 ಏಕದಿನ ಹಾಗೂ 23 ಟಿ20 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿರುವುದು ನನ್ನ ಪಾಲಿಗೆ ಗೌರವ ಹಾಗೂ ಒಳ್ಳೆಯ ಅವಕಾಶ ಎಂದು ಭಾವಿಸುತ್ತೇನೆ. ತಂಡದ ಇತಿಹಾಸ ಹಾಗೂ ಸಾಧನೆಯೇ ಆ ತಂಡವು ಜಗತ್ತಿನ ಅತ್ಯಂತ ಯಶಸ್ವಿ ತಂಡ ಎನ್ನುವುದನ್ನು ಸಾರಿ ಹೇಳುತ್ತಿದೆ. ತಂಡದಿಂದ ಒಳ್ಳೆಯ ಫಲಿತಾಂಶ ಹೊರಹೊಮ್ಮಲು ಎದುರಾಗಬಲ್ಲ ಸವಾಲನ್ನು ಎದುರಿಸಲು ಸಜ್ಜಾಗಿದ್ದೇನೆ. ಇದೊಂದು ಬಲಿಷ್ಠ ಆಟಗಾರರನ್ನೊಳಗೊಂಡ ಅತ್ಯುತ್ತಮ ನಾಯಕತ್ವ ಹೊಂದಿರುವ ತಂಡವಾಗಿದೆ. ಈ ತಂಡದ ಮೌಲ್ಯ ಹೆಚ್ಚಿಸುವಂತಹ ಕೆಲಸ ಮಾಡಲು ತಾವು ಎದುರು ನೋಡುತ್ತಿರುವುದಾಗಿ ಮಾರ್ಕ್ ಬೌಷರ್ ಹೇಳಿದ್ದಾರೆ.
