ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲು ಕಾಣುವ ಮೂಲಕ ಸರಣಿ ಕೈಚೆಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.‌

ಲಖನೌ(ಮಾ.14): ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡ 4ನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ದ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 3-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಪೂನಂ ರಾವತ್‌ ಅಜೇಯ ಶತಕ ವ್ಯರ್ಥವಾದಂತಾಗಿದೆ.

ಇಲ್ಲಿನ ಏಕಾನ ಮೈದಾನದಲ್ಲಿ ಭಾರತ ನೀಡಿದ್ದ 267 ರನ್‌ಗಳ ಸವಾಲಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಕಳೆದ ಪಂದ್ಯದಲ್ಲಿ ಶತಕ ಚಚ್ಚಿದ್ದ ಲಿಜೆಲ್ಲೆ ಲೀ 69 ರನ್‌ ಬಾರಿಸಿದರೆ, ಲೌರಾ ವೋಲ್ಡ್‌ವರ್ಟ್ 53, ಲಾರಾ ಗುಡ್ಡಾಲ್‌ ಅಜೇಯ 59 ಹಾಗೂ ಮಿಘನ್‌ ಡು ಪ್ರೇಜ್‌ 61 ರನ್‌ ಬಾರಿಸುವ ಮೂಲಕ ಹರಿಣಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 

Scroll to load tweet…

ಪೂನಂ ರಾವತ್‌ ಶತಕ; ದಕ್ಷಿಣ ಆಫ್ರಿಕಾಗೆ ಸವಾಲಿನ ಗುರಿ

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟ್‌ ಮಾಡುವ ಅವಕಾಶ ಪಡೆದ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ ಪೂನಂ ರಾವತ್‌ ಬಾರಿಸಿದ ಅಜೇಯ ಶತಕ(104*) ಹಾಗೂ ಹರ್ಮನ್‌ಪ್ರೀತ್‌ ಕೌರ್ ಸಿಡಿಸಿದ ಸ್ಫೋಟಕ ಅರ್ಧಶತಕ(54)ದ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು 266 ರನ್‌ ಕಲೆಹಾಕಿತ್ತು.