* ಅಭ್ಯಾಸ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ತೋರಿದ ಟೀಂ ಇಂಡಿಯಾ* ಕೌಂಟಿ ಇಲೆವನ್ ಮೇಲೆ ಭರ್ಜರಿ ಶತಕ ಚಚ್ಚಿದ ರಾಹುಲ್‌* ರೋಹಿತ್ ಶರ್ಮಾ, ಮಯಾಂಕ್‌ ಅಗರ್‌ವಾಲ್ ಫೇಲ್

ಡರ್ಹಮ್(ಜು.21)‌: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಸ್ಥಾನ ಕರ್ನಾಟಕದ ಕೆ.ಎಲ್‌.ರಾಹುಲ್‌ ಪಾಲಾಗುವುದು ಬಹುತೇಕ ಖಚಿತವೆನಿಸಿದೆ. ಕೌಂಟಿ ಇಲೆವೆನ್‌ ವಿರುದ್ಧ ಮಂಗಳವಾರ ಆರಂಭಗೊಂಡ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ರಾಹುಲ್‌ ತಾವು ಇಂಗ್ಲೆಂಡ್‌ ಸವಾಲಿಗೆ ಸಿದ್ಧರಾಗಿರುವುದಾಗಿ ಸಾಬೀತುಪಡಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 306 ರನ್‌ ಗಳಿಸಿತು. ರಾಹುಲ್‌ 150 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್‌ನೊಂದಿಗೆ 101 ರನ್‌ ಗಳಿಸಿ ಬ್ಯಾಟಿಂಗ್‌ನಿಂದ ನಿವೃತ್ತಿ ಪಡೆದರು. ಸಣ್ಣ ಪ್ರಮಾಣದ ಗಾಯದಿಂದಾಗಿ ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಪಂದ್ಯಕ್ಕೆ ಲಭ್ಯರಿರಲಿಲ್ಲ. ಹೀಗಾಗಿ, ರೋಹಿತ್‌ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ. 

ರೋಹಿತ್‌(09), ಮಯಾಂಕ್‌(28), ಪೂಜಾರ(21) ಹಾಗೂ ಹನುಮ ವಿಹಾರಿ (24) ದೊಡ್ಡ ಇನ್ನಿಂಗ್ಸ್‌ ಆಡದೆ ಔಟಾದ ಬಳಿಕ, ರಾಹುಲ್‌ ಹಾಗೂ ರವೀಂದ್ರ ಜಡೇಜಾ 5ನೇ ವಿಕೆಟ್‌ಗೆ 127 ರನ್‌ ಜೊತೆಯಾಟವಾಡಿದರು. ಜಡೇಜಾ 75 ರನ್‌ ಗಳಿಸಿ ಔಟಾದರು.

ಇಂದಿನಿಂದ ಕೌಂಟಿ ಇಲೆವೆನ್‌ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ

ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್‌ ಸರಣಿ ಆಗಸ್ಟ್ 04ರಿಂದ ಆರಂಭವಾಗಲಿದ್ದು, ಇದಕ್ಕೂ ಪೂರ್ವಭಾವಿಯಾಗಿ ಕೌಂಟಿ ಇಲೆವನ್‌ ವಿರುದ್ದ ಭಾರತ ತಂಡವು ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಸೌಥಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ, ಇದೀಗ ಎರಡನೇ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.