ನವದೆಹಲಿ(ಜ.31): ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿನ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಕಂಡು ಆ ಬಳಿಕ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು, 2-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸಿದ ಟೀಂ ಇಂಡಿಯಾಗೆ ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದ್ದಾರೆ.

ಕಠಿಣ ಪರಿಶ್ರಮ ಹಾಗೂ ಅದ್ಭುತ ಟೀಂ ವರ್ಕ್‌ ಮೂಲಕ ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಿ ಗೆಲುವನ್ನು ದಾಖಲಿಸಿದ ಅಜಿಂಕ್ಯ ರಹಾನೆ ನೇತೃದ ಟೀಂ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ.

IPL ಅಭಿಮಾನಿಗಳಿಗೆ ಸಿಹಿ ಸುದ್ದಿ; ಭಾರತದಲ್ಲೇ ನಡೆಯಲಿದೆ ಐಪಿಎಲ್‌..!

ಈ ತಿಂಗಳಿನಲ್ಲಿ ಕ್ರಿಕೆಟ್‌ ಪಿಚ್‌ನಲ್ಲಿ ನಮಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಆರಂಭಿಕ ಹಿನ್ನಡೆಯ ನಡುವೆಯೂ ಬಲಿಷ್ಠ ಆಸ್ಟ್ರೇಲಿಯಾಗೆ ಅವರದ್ದೇ ನೆಲದಲ್ಲಿ ತಿರುಗೇಟು ನೀಡಿದ್ದು ನಿಜಕ್ಕೂ ಅದ್ಭುತ. ನಮ್ಮ ತಂಡದ ಕಠಿಣ ಪರಿಶ್ರಮ ಹಾಗೂ ತಂಡವಾಗಿ ಆಡಿದ ರೀತಿ ನಿಜಕ್ಕೂ ಸ್ಪೂರ್ತಿದಾಯಕವಾದದ್ದು ಎಂದು ಹೇಳಿದ್ದಾರೆ.

ಮೋದಿ ಮಾತಿಗೆ ಬಿಸಿಸಿಐ ಧನ್ಯವಾದ ಅರ್ಪಿಸಿದೆ. ನಿಮ್ಮ ಸ್ಪೂರ್ತಿದಾಯಕ ಮಾತುಗಳಿಗೆ ಧನ್ಯವಾದಗಳು. ರಾಷ್ಟ್ರಧ್ವಜವನ್ನು ಎತ್ತರಕ್ಕೆ ಹಾರಾಡುವಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ ಎಂದು ರೀಟ್ವೀಟ್‌ ಮಾಡಿದೆ.  

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಡಿಲೇಡ್‌ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಅದಾದ ಬಳಿಕ ಸಂಘಟಿತ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತ್ತು.