14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಉನ್ನತ ಮೂಲಗಳು ಖಚಿತಪಡಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜ.31): 2021ರ ಐಪಿಎಲ್‌ ಆವೃತ್ತಿಯನ್ನು ಭಾರತದಲ್ಲಿಯೇ ಆಯೋಜಿಸಲು ಯೋಜನೆ ರೂಪಿಸುತ್ತಿದ್ದೇವೆ. ಇದಕ್ಕಾಗಿ ಕೊರೋನಾ ವಿರುದ್ಧ ಹೋರಾಡಲು ಭಾರತ ಸರ್ಕಾರದೊಂದಿಗೆ ಕೈ ಜೋಡಿಸಲಿದ್ದೇವೆ. ಅಲ್ಲದೇ ಟೀಂ ಇಂಡಿಯಾ ಆಟಗಾರರಿಗೆ ಕೊರೋನಾ ಲಸಿಕೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಶನಿವಾರ ಹೇಳಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. 14ನೇ ಆವೃತ್ತಿಯ ಟೂರ್ನಿಯನ್ನು ಭಾರತದಲ್ಲಿ ನಡೆಸಲು ಬೇಕಿರುವ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ. ಸದ್ಯ ಭಾರತದಲ್ಲಿ ಕೊರೋನಾ ಹಾವಳಿ ಕಡಿಮೆಯಾಗುತ್ತಿದೆ. ಯುಎಇಗಿಂತ ಭಾರತ ಹೆಚ್ಚು ಸುರಕ್ಷಿತವಾಗಿದೆ. ಈಗಾಗಲೇ ಲಸಿಕೆ ದೊರೆತಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಮತ್ತಷ್ಟು ಸುಧಾರಣೆ ಕಾಣಲಿದೆ. ಈ ಕಾರಣದಿಂದ ಐಪಿಎಲ್‌ನ್ನು ಇಲ್ಲಿಯೇ ಆಯೋಜಿಸುವ ಚಿಂತನೆ ನಡೆದಿದೆ. ಐಪಿಎಲ್‌ ಟೂರ್ನಿಯನ್ನು ಭಾರತದಲ್ಲಿ ನಡೆಸಲು ಬಿಸಿಸಿಐ ಸಮರ್ಥವಿದೆ ಎಂದಿದ್ದಾರೆ.

87 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು..!

ರಣಜಿ ಟ್ರೋಫಿ ಆಯೋಜಿಸಿದ್ದರೆ, ಐಪಿಎಲ್‌ ಟೂರ್ನಿ ನಡೆಸಲು ಮತ್ತಷ್ಟು ವಿಳಂಬವಾಗುತ್ತಿತ್ತು. ಆದರೆ ರಣಜಿಯನ್ನು ರದ್ದು ಮಾಡಿರುವ ಕಾರಣದಿಂದ ನಿಗದಿತ ವೇಳೆಯಲ್ಲಿ ಐಪಿಎಲ್‌ ಆಯೋಜನೆಗೊಳ್ಳಲಿದೆ. ಈ ಋುತುವಿನ ರಣಜಿ ಟ್ರೋಫಿಯನ್ನು ನಡೆಸಲು ಬಿಸಿಸಿಐ ಈಗಾಗಲೇ ನಿರಾಕರಿಸಿದೆ.

ಭಾರತ ಕ್ರಿಕೆಟ್‌ ತಂಡದ ಪುರುಷ ಹಾಗೂ ಮಹಿಳಾ ಆಟಗಾರರಿಗೆ ಕೊರೋನಾ ಲಸಿಕೆ ನೀಡಲು ಚಿಂತಿಸಲಾಗಿದೆ ಎಂದು ಧುಮಾಲ್‌ ಹೇಳಿದ್ದಾರೆ. ಸರ್ಕಾರದ ನಿರ್ದೇಶನದಂತೆ ಈಗಾಗಲೇ ಆರೋಗ್ಯ ಕಾರ‍್ಯಕರ್ತರು, ಕೊರೋನಾ ವಾರಿಯರ್ಸ್‌ ಲಸಿಕೆ ಪಡೆಯುತ್ತಿದ್ದಾರೆ. ಟೀಂ ಇಂಡಿಯಾ ಆಟಗಾರರಿಗೂ ಲಸಿಕೆ ಪಡೆಯುವ ಮೂಲಕ ಸರ್ಕಾರದ ಉದ್ದೇಶವನ್ನು ಸಾಕಾರಗೊಳಿಸುವ ಯೋಚನೆ ಹೊಂದಿದ್ದೇವೆ ಎಂದಿದ್ದಾರೆ.