ಪ್ರಧಾನಿ ಮೋದಿ ಮೀಟ್ ಮಾಡಿದ ಟೀಂ ಇಂಡಿಯಾ, ಮುಂಬೈಗೆ ಮುಂದಿನ ಪಯಣ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ, ಇಂದು ಬೆಳಗ್ಗೆ ಭಾರತಕ್ಕೆ ಬಂದಿಳಿದಿದೆ. ಇಂದು ಬೆಳಗ್ಗೆ ಇಡೀ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಔತನಕೂಟ ನೀಡಿದರು. ಈ ವೇಳೆ ಇಡೀ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು. 

ICC T20 World Cup 2024 Team India Arrival Updates Team India Leaves After Meeting PM Narendra Modi kvn

ನವದೆಹಲಿ:  ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಚಾಂಪಿಯನ್ ಜಯಿಸಿದ ಬಳಿಕ ಇಂದು ಭಾರತಕ್ಕೆ ಬಂದಿಳಿದಿದ್ದು, ಟೀಂ ಇಂಡಿಯಾಗೆ ತವರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಭಾರತಕ್ಕೆ ಬಂದಿಳಿದ ಟೀಂ ಇಂಡಿಯಾ, ಖಾಸಗಿ ಹೋಟೆಲ್‌ಗೆ ತೆರಳಿದ ಬಳಿಕ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿತು. ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಪ್ರಧಾನಿಯವರ ಜತೆ ಮಾತುಕತೆ ಮುಗಿಸಿದ ಬಳಿಕ ಇದೀಗ ಭಾರತ ಕ್ರಿಕೆಟ್ ತಂಡವು ಮುಂಬೈನತ್ತ ಪ್ರಯಾಣ ಬೆಳೆಸಿದೆ.

ಜೂನ್ 29ರಂದು ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು 7 ರನ್ ರೋಚಕ ಜಯ ಸಾಧಿಸಿ 17 ವರ್ಷಗಳ ಬಳಿಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದಾದ ಬಳಿಕ ಜುಲೈ 01ರಂದು ದಿನ ಟೀಂ ಇಂಡಿಯಾ ತವರಿಗೆ ವಾಪಾಸಾಗಬೇಕಿತ್ತು. ಆದರೆ ಬಾರ್ಬಡೊಸ್‌ನಲ್ಲಿ ಬೆರಿಲ್ ಚಂಡಮಾರುತ ಅಪ್ಪಳಿಸಿದ್ದರಿಂದ, ಪ್ರತಿಕೂಲ ವಾತಾವರಣ ಉಂಟಾಗಿ ಭಾರತ ತಂಡ ತವರಿಗೆ ವಾಪಾಸ್ಸಾಗುವುದು ತಡವಾಯಿತು. ಇದೀಗ ಇಂದು ಮುಂಜಾನೆ 6 ಗಂಟೆಗೆ ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತ ಕ್ರಿಕೆಟ್ ತಂಡವು ಬಂದಿಳಿಯಿತು. ಭಾರತ ತಂಡವು ತವರಿಗೆ ಬಂದಿಳಿಯುತ್ತಿದ್ದಂತೆಯೇ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.

ಮುಂಬೈನಲ್ಲಿಂದು ಇಂದು ಸಂಜೆ ತೆರೆದ ವಾಹನದಲ್ಲಿ ರೋಡ್‌ ಶೋ:

ಸದ್ಯ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಔತಣಕೂಟದಲ್ಲಿ ಭಾಗವಹಿಸಿದ ಟೀಂ ಇಂಡಿಯಾ, ಇದೀಗ ಸಂಜೆ 5 ಗಂಟೆಯಿಂದ ನಾರಿಮನ್ ಪಾಯಿಂಟ್‌ನಿಂದ ಸುಮಾರು 2 ಕಿ. ಮೀ. ದೂರ ಇರುವ ವಾಂಖೇಡೆ ಕ್ರೀಡಾಂಗಣದವರೆಗೆ ಆಟಗಾರರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಿದ್ದಾರೆ. 2 ಗಂಟೆ ಗಳ ಕಾಲ ಮೆರವಣಿಗೆ ನಡೆಯುವ ನಿರೀಕ್ಷೆಯಿದ್ದು, ಬಳಿಕ 7 ಗಂಟೆಗೆ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿಸಿಸಿಐ ಘೋಷಿಸಿರುವ 125 ಕೋಟಿ ರು. ನಗದು ಬಹುಮಾನವನ್ನೂ ಇದೇ ವೇಳೆ ಹಸ್ತಾಂತರಿಸಲಾಗುತ್ತದೆ.

ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡ ಭಾರತ: ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಕಳೆದ 11 ವರ್ಷಗಳಿಂದ ಭಾರತ ಕ್ರಿಕೆಟ್ ತಂಡವು ಹಲವು ಐಸಿಸಿ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹಲವು ಸವಾಲುಗಳನ್ನು ಮೆಟ್ಟಿನಿಂತ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕೊನೆಗೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕವಾಗಿ ಮಣಿಸಿ ಕೊನೆಗೂ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

Latest Videos
Follow Us:
Download App:
  • android
  • ios