ಅಡಿಲೇಡ್‌ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕೊಹ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದು, ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಅಡಿಲೇಡ್: ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರುವ ಟೀಂ ಇಂಡಿಯಾ, ಇದೀಗ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.

ಹಿಂದಿನ ಪ್ರವಾಸದಲ್ಲಿ ಕೇವಲ 36 ರನ್‌ಗೆ ಆಲೌಟ್‌ ಆಗಿದ್ದ ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು 2ನೇ ಟೆಸ್ಟ್‌ನಲ್ಲಿ ಎದುರಿಸಲು ಸಜ್ಜಾಗಿದೆ. ಇನ್ನು ನಿರೀಕ್ಷೆಯಂತೆಯೇ ಭಾರತ ಕ್ರಿಕೆಟ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ತಂಡ ಕೂಡಿಕೊಂಡಿದ್ದು, ದೇವದತ್ ಪಡಿಕ್ಕಲ್ ಹಾಗೂ ಧೃವ್ ಜುರೆಲ್ ತಂಡದಿಂದ ಹೊರಬಿದ್ದಿದ್ದಾರೆ. ವಾಷಿಂಗ್ಟನ್ ಸುಂದರ್ ಬದಲಿಗೆ ರವಿಚಂದ್ರನ್ ಅಶ್ವಿನ್ ತಂಡ ಕೂಡಿಕೊಂಡಿದ್ದಾರೆ.

Scroll to load tweet…

ಅಡಿಲೇಡ್‌ನಲ್ಲಿ ಹೊಸ ದಾಖಲೆಗೆ ಕೊಹ್ಲಿ ಕಾತರ!

ಅಡಿಲೇಡ್‌ ಓವಲ್‌ ಮೈದಾನ ವಿರಾಟ್‌ ಕೊಹ್ಲಿಯ ನೆಚ್ಚಿನ ತಾಣಗಳಲ್ಲಿ ಒಂದು. ಇಲ್ಲಿ ಅವರು ಆಡಿರುವ ಟೆಸ್ಟ್‌ಗಳಲ್ಲಿ 3 ಶತಕಗಳೊಂದಿಗೆ 509 ರನ್‌ ಕಲೆಹಾಕಿದ್ದಾರೆ. ಇಂಗ್ಲೆಂಡ್‌ನ ಜ್ಯಾಕ್‌ ಹಾಬ್ಸ್‌ 5 ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದರು. ಕೊಹ್ಲಿ ಈ ಟೆಸ್ಟ್‌ನಲ್ಲಿ ಸೆಂಚುರಿ ಬಾರಿಸಿದರೆ, ಅಡಿಲೇಡ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ವಿದೇಶಿ ಬ್ಯಾಟರ್‌ ಎನ್ನುವ ದಾಖಲೆಗೆ ಪಾತ್ರರಾಗಲಿದ್ದಾರೆ.

ಮೊದಲ ದಿನದಾಟಕ್ಕೆ ಮಳೆ ಕಾಟ ಸಾಧ್ಯತೆ

ಶುಕ್ರವಾರ ಅಡಿಲೇಡ್‌ನಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಮೊದಲ ದಿನದಾಟಕ್ಕೆ ಅಡ್ಡಿಯಾಗಬಹುದು. 2ನೇ ದಿನದ ಮೊದಲ ಅವಧಿಯಲ್ಲೂ ಅಲ್ಪ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಬಳಿಕ ಮಳೆ ನಿರೀಕ್ಷೆ ಇಲ್ಲ.

ಉಭಯ ತಂಡಗಳ ಆಟಗಾರರ ಪಟ್ಟಿ

ಭಾರತ: ಯಶಸ್ವಿ ಜೈಸ್ವಾಲ್‌, ಕೆ.ಎಲ್‌.ರಾಹುಲ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ(ನಾಯಕ), ರಿಷಭ್‌ ಪಂತ್‌, ಅಶ್ವಿನ್‌, ನಿತೀಶ್‌ ರೆಡ್ಡಿ, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಸಿರಾಜ್‌, ಹರ್ಷಿತ್‌ ರಾಣಾ.

ಆಸ್ಟ್ರೇಲಿಯಾ: ಉಸ್ಮಾನ್‌ ಖವಾಜ, ಮೆಕ್‌ಸ್ವೀನಿ, ಮಾರ್ನಸ್‌ ಲಬುಶೇನ್, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕೇರಿ, ಪ್ಯಾಟ್‌ ಕಮಿನ್ಸ್‌(ನಾಯಕ), ಮಿಚೆಲ್‌ ಸ್ಟಾರ್ಕ್‌, ನೇಥನ್‌ ಲಯನ್‌, ಸ್ಕಾಟ್‌ ಬೋಲೆಂಡ್‌.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌