Asianet Suvarna News Asianet Suvarna News

Pink Ball Test: ಸ್ಮೃತಿ ಮಂಧನಾ ಆಕರ್ಷಕ ಶತಕ, ಬೃಹತ್ ಮೊತ್ತದತ್ತ ಭಾರತ

* ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಚಚ್ಚಿದ ಸ್ಮೃತಿ ಮಂಧನಾ

* ಎರಡನೇ ದಿನದಾಟಕ್ಕೂ ಎದುರಾಗಿದೆ ವರುಣನ ಕಾಟ

* ಮಂಧನಾ ಶತಕದ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 276 ರನ್‌ ಬಾರಿಸಿದೆ

Pink Ball Test Smriti Mandhana falls after slamming a magnificent maiden Century kvn
Author
Gold Coast QLD, First Published Oct 1, 2021, 3:51 PM IST

ಗೋಲ್ಡ್‌ ಕೋಸ್ಟ್‌(ಅ.01): ಭಾರತ ಮಹಿಳಾ ಕ್ರಿಕೆಟ್‌ (Indian Women's Cricket) ತಂಡದ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧನಾ (Smriti Mandhana) ಆಸ್ಟ್ರೇಲಿಯಾ ವಿರುದ್ದದ ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಧನಾ ಬಾರಿಸಿದ ಶತಕದ ನೆರವಿನಿಂದ ಮಿಥಾಲಿ ರಾಜ್ (Mithali Raj) ನೇತೃತ್ವದ ಮಹಿಳಾ ಟೀಂ ಇಂಡಿಯಾ ಎರಡನೇ ದಿನದಾಟಕ್ಕೆ ಮಳೆ ಅಡ್ಡಿ ಪಡಿಸುವ ಮುನ್ನ 5 ವಿಕೆಟ್ ಕಳೆದುಕೊಂಡು 276 ರನ್‌ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡಲಾರಂಭಿಸಿದೆ.

ಮೊದಲ ದಿನದಾಟದಂತ್ಯದ ವೇಳೆ 1 ವಿಕೆಟ್ ಕಳೆದುಕೊಂಡು 132 ರನ್‌ ಕಲೆಹಾಕಿದ್ದ ಟೀಂ ಇಂಡಿಯಾ (Team India) ಇದಾದ ಬಳಿಕ ಎರಡನೇ ದಿನದಾಟವನ್ನು ಅತ್ಯಂತ ಎಚ್ಚರಿಕೆಯಿಂದ ಆರಂಭಿಸಿತು. 46ನೇ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಭರಪೂರವಾಗಿ ಬಳಸಿಕೊಂಡು ಮಂಧನಾ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ ಶತಕ ಬಾರಿಸುವಲ್ಲಿ ಯಶಸ್ವಿಯಾದರು. ಮಂಧನಾ ಒಟ್ಟು 167 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಿಂಕ್‌ ಬಾಲ್ ಟೆಸ್ಟ್‌ (Pink Ball Test) ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಮಹಿಳಾ ಬ್ಯಾಟರ್ ಎನ್ನುವ ಗೌರವಕ್ಕೆ ಮಂಧನಾ ಪಾತ್ರರಾದರು. 

ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಬೌಂಡರಿಗಳ ಮಳೆಗರೆದ ಮಂಧನಾ 216 ಎಸೆತಗಳನ್ನು ಎದುರಿಸಿ 22 ಬೌಂಡರಿ ಹಾಗು 1 ಸಿಕ್ಸರ್‌ ನೆರವಿನಿಂದ 127 ರನ್‌ ಬಾರಿಸಿ ಗಾರ್ಡ್ನರ್‌ಗೆ ವಿಕೆಟ್ ಒಪ್ಪಿಸಿದರು. ಮಂಧನಾ ವಿಕೆಟ್ ಪತನದ ಬಳಿಕ ಭಾರತ ಮಹಿಳಾ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. 

Pink Ball Test ಮಳೆಯಾಟದ ನಡುವೆಯೂ ಮಿಂಚಿದ ಮಂಧನಾ..!

ಅಂಪೈರ್‌ ಔಟ್‌ ನೀಡದಿದ್ದರೂ ಮೈದಾನ ತೊರೆದ ಪೂನಂ: ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದ ಪೂನಂ ರಾವತ್ 165 ಎಸೆತಗಳನ್ನು ಎದುರಿಸಿ 36 ರನ್‌ ಬಾರಿಸಿದ್ದರು. ಈ ವೇಳೆ ಮೊಲಿನ್ಯುಕ್ಸ್‌ ಕ್ಯಾಚ್‌ಗೆ ಮನವಿ ಸಲ್ಲಿಸಿದರು. ಅಂಪೈರ್ ಔಟ್‌ ನೀಡಲಿಲ್ಲ. ಹೀಗಿದ್ದೂ ಪೂನಂ ರಾವತ್ ತಾವು ಔಟ್‌ ಎಂದು ಭಾವಿಸಿ ಮೈದಾನ ತೊರೆದರು. ಆದರೆ ರೀಪ್ಲೇಯಲ್ಲಿ ನೋಡಿದಾಗ ಚೆಂಡು ಬ್ಯಾಟಿಗೆ ತಾಗದೇ ಇರುವುದು ಸ್ಪಷ್ಟವಾಗಿತ್ತು. 

ಇನ್ನುಳಿದಂತೆ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ 30 ರನ್‌ ಬಾರಿಸಿ ರನೌಟ್‌ ಆಗಿ ಪೆವಿಲಿಯನ್ ಸೇರಿದರೆ, ಯಾಶಿಕಾ ಭಾಟಿಯಾ 19 ರನ್ ಬಾರಿಸಿ ಎಲಿಸಾ ಪೆರ್ರಿಗೆ ವಿಕೆಟ್ ಒಪ್ಪಿಸಿದರು. ಸದ್ಯ ದೀಪ್ತಿ ಶರ್ಮಾ(12) ಹಾಗೂ ವಿಕೆಟ್‌ ಕೀಪರ್‌ ಬ್ಯಾಟರ್ ತಾನಿಯಾ ಭಾಟಿಯಾ(0) ಕ್ರೀಸ್‌ ಕಾಯ್ದುಕೊಂಡಿದ್ದಾರೆ.

Follow Us:
Download App:
  • android
  • ios