Asianet Suvarna News Asianet Suvarna News

World Test Championship: ಮಹತ್ವದ ದಾಖಲೆ ನಿರ್ಮಿಸಿದ ರವಿಚಂದ್ರನ್ ಅಶ್ವಿನ್..!

* ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ದಾಖಲೆ ಬರೆದ ಅಶ್ವಿನ್

* ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಅಶ್ವಿನ್ ಪಾಲಾದ ಅಪರೂಪದ ದಾಖಲೆ

* ಸದ್ಯ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಅಶ್ವಿನ್

Pink Ball Test Ravichandran Ashwin First Player To Reach 100 Test Wicket Milestone in World Test Championship kvn
Author
Bengaluru, First Published Mar 15, 2022, 1:00 PM IST

ಬೆಂಗಳೂರು(ಮಾ.15): ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್‌ (Pink Ball Test) ಪಂದ್ಯದ ವೇಳೆ ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ (Ravichandran Ashwin) ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ (Team India), ಶ್ರೀಲಂಕಾ ಎದುರು 238 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಇದೇ ಪಂದ್ಯದಲ್ಲಿ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಇತಿಹಾಸದಲ್ಲಿ ಮಹತ್ವದ ದಾಖಲೆ ಬರೆದಿದ್ದಾರೆ.

ಬೆಂಗಳೂರಿನ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 30 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಅಶ್ವಿನ್‌ 55 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಒಟ್ಟು 6 ವಿಕೆಟ್‌ಗಳನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದರು. ಇದರ ಜತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 100 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ಬೌಲರ್ ಎನ್ನುವ ಕೀರ್ತಿಗೆ ಅಶ್ವಿನ್ ಪಾತ್ರರಾಗಿದ್ದಾರೆ. 2019ರಿಂದ 2021ರವರೆಗೆ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಶ್ವಿನ್‌ 14 ಪಂದ್ಯಗಳನ್ನಾಡಿ 71 ವಿಕೆಟ್ ಕಬಳಿಸಿದ್ದರು. ಈ ಮೂಲಕ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಇದೀಗ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಶ್ವಿನ್ ಈಗಾಗಲೇ 7 ಪಂದ್ಯಗಳನ್ನಾಡಿ 29 ವಿಕೆಟ್ ಕಬಳಿಸುವ ಮೂಲಕ ಒಟ್ಟಾರೆ 21 ಪಂದ್ಯಗಳನ್ನಾಡಿ 100 ಬಲಿ ಪಡೆದಿದ್ದಾರೆ.

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸದ್ಯ ರವಿಚಂದ್ರನ್ ಅಶ್ವಿನ್ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಒಟ್ಟು 40 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಪಿಂಕ್‌ ಬಾಲ್ ಟೆಸ್ಟ್ ಪಂದ್ಯದಲ್ಲಿಯೇ ರವಿಚಂದ್ರನ್ ಅಶ್ವಿನ್‌, ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಡೇಲ್ ಸ್ಟೇನ್ ಅವರನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್‌ ಸ್ಟೇನ್‌ ಒಟ್ಟು 439 ವಿಕೆಟ್ ಕಬಳಿಸಿದ್ದರು. ಇದೀಗ ಭಾರತದ ಆರ್‌.ಅಶ್ವಿನ್‌ 442 ಟೆಸ್ಟ್‌ ವಿಕೆಟ್‌ಗಳೊಂದಿಗೆ 8ನೇ ಸ್ಥಾನಕ್ಕೇರಿದ್ದಾರೆ. 

Pink Ball Test: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಡೇಲ್ ಸ್ಟೇನ್ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್‌

35 ವರ್ಷದ ರವಿಚಂದ್ರನ್ ಅಶ್ವಿನ್‌, ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್(800), ಶೇನ್ ವಾರ್ನ್‌(708), ಜೇಮ್ಸ್ ಆಂಡರ್‌ಸನ್(640*), ಅನಿಲ್ ಕುಂಬ್ಳೆ(619), ಗ್ಲೆನ್ ಮೆಗ್ರಾಥ್(563), ಸ್ಟುವರ್ಟ್‌ ಬ್ರಾಡ್(537) ಹಾಗೂ ಕರ್ಟ್ನಿ ವಾಲ್ಷ್‌(519) ಅವರಿಗಿಂತ ಹಿಂದಿದ್ದಾರೆ. ಇದರ ಹೊರತಾಗಿ ಈ ಪಟ್ಟಿಯಲ್ಲಿ ಸಕ್ರಿಯ ಬೌಲರ್‌ ಪಟ್ಟಿಯಲ್ಲಿ ಜೇಮ್ಸ್‌ ಆಂಡರ್‌ಸನ್ ಹಾಗೂ ಸ್ಟುವರ್ಟ್‌ ಬ್ರಾಡ್ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನುಳಿದ ಆಟಗಾರರು ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ.

ಇನ್ನು ರವಿಚಂದ್ರನ್ ಅಶ್ವಿನ್ ಭಾರತ ಪರ ಗರಿಷ್ಠ ಟೆಸ್ಟ್‌ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಇದುವರೆಗೂ ಭಾರತ ಪರ 86 ಟೆಸ್ಟ್ ಪಂದ್ಯಗಳನ್ನಾಡಿ ಒಟ್ಟು 442 ವಿಕೆಟ್ ಕಬಳಿಸಿದ್ದಾರೆ. 

Follow Us:
Download App:
  • android
  • ios