Asianet Suvarna News Asianet Suvarna News

Pink Ball Test: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದೇ ದಿನ 16 ವಿಕೆಟ್ ಪತನ..!

* ಪಿಂಕ್‌ ಬಾಲ್ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಚಾಲನೆ

* ಮೊದಲ ದಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೌಲರ್‌ಗಳದ್ದೇ ದರ್ಬಾರು

* ಬೌಲಿಂಗ್‌ ಪಿಚ್‌ನಲ್ಲಿಯೂ ದಿಟ್ಟ 92 ರನ್ ಬಾರಿಸಿದ ಶ್ರೇಯಸ್ ಅಯ್ಯರ್

Pink ball Test Jasprit Bumrah Mohammed Shami Put India on Top Sri Lanka 86 for 6 at day 1 Stumps kvn
Author
Bengaluru, First Published Mar 13, 2022, 9:01 AM IST

ಬೆಂಗಳೂರು(ಮಾ.13): ತವರಿನಲ್ಲಿ ಭಾರತ ಟೆಸ್ಟ್‌ ಪಂದ್ಯವನ್ನು 5 ದಿನಗಳವರೆಗೂ ಕೊಂಡೊಯ್ಯುವುದು ತೀರಾ ಅಪರೂಪ. ಮೊದಲ ಟೆಸ್ಟ್‌ ಮೂರೇ ದಿನಕ್ಕೆ ಮುಕ್ತಾಯಗೊಂಡಿದ್ದನ್ನು ನೋಡಿದ ಮೇಲೆ, 2ನೇ ಪಂದ್ಯವೂ 5ನೇ ದಿನ ಕಾಣುವುದಿಲ್ಲ ಎನ್ನುವ ನಿರೀಕ್ಷೆಯೊಂದಿಗೇ ಆರಂಭಗೊಂಡ ಬೆಂಗಳೂರು ಟೆಸ್ಟ್‌ (Bengaluru Test), ಮೊದಲ ದಿನವೇ ಅನಿರೀಕ್ಷಿತವಾಗಿ 16 ವಿಕೆಟ್‌ಗಳ ಪತನಕ್ಕೆ ಸಾಕ್ಷಿಯಾಗಿದೆ. ಬಿಸಿಲಿನಲ್ಲಿ ಚೆಂಡು ಹೆಚ್ಚಾಗಿ ಸ್ಪಿನ್‌ ಆಗುವಾಗ ಭಾರತೀಯರ ಮೇಲೆ ಸವಾರಿ ಮಾಡುವ ಅವಕಾಶವನ್ನು ಕೈಚೆಲ್ಲಿದ ಶ್ರೀಲಂಕಾ ಬೌಲರ್‌ಗಳು, ಆತಿಥೇಯರಿಗೆ 4.25 ರನ್‌ರೇಟ್‌ನಲ್ಲಿ ರನ್‌ ಕಲೆಹಾಕಲು ಬಿಟ್ಟು ಎಡವಟ್ಟು ಮಾಡಿಕೊಂಡರು. ಶ್ರೇಯಸ್‌ ಅಯ್ಯರ್‌ರ (Shreyas Iyer) ಮನಮೋಹಕ ಬ್ಯಾಟಿಂಗ್‌ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸಲ್ಲಿ 252 ರನ್‌ಗೆ ಆಲೌಟ್‌ ಆಯಿತು.

ಸಂಜೆಯ ಬಳಿಕ ಚೆಂಡು ಅಷ್ಟಾಗಿ ಸ್ಪಿನ್‌ ಆಗದೆ ಇದ್ದಾಗ ಇಬ್ಬರು ವಿಶ್ವ ಶ್ರೇಷ್ಠ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ (Jasprit Bumrah) ಹಾಗೂ ಮೊಹಮದ್‌ ಶಮಿಯ ದಾಳಿ ಎದುರು ನಿಲ್ಲಲು ಪರದಾಡಿದ ಲಂಕನ್ನರು ದಿನದಂತ್ಯಕ್ಕೆ 6 ವಿಕೆಟ್‌ಗೆ 86 ರನ್‌ ಗಳಿಸಿದರು. ಇನ್ನೂ 166 ರನ್‌ಗಳ ಹಿನ್ನಡೆಯಲ್ಲಿರುವ ಪ್ರವಾಸಿ ತಂಡ, 2ನೇ ದಿನವಾದ ಭಾನುವಾರ ಮೊದಲ ಅವಧಿಯಲ್ಲಿ ಭಾರತದ ತ್ರಿವಳಿ ಸ್ಪಿನ್ನರ್‌ಗಳ ಸವಾಲು ಎದುರಿಸಬೇಕಿದ್ದು, ಭಾರತಕ್ಕೆ ಪಂದ್ಯ ಗೆಲ್ಲಲು ಸುಲಭವಾಗುವಷ್ಟುಮುನ್ನಡೆ ಬಿಟ್ಟುಕೊಡುವ ಆತಂಕದಲ್ಲಿದೆ. ಬೂಮ್ರಾ ಹಾಗೂ ಶಮಿ ತಮ್ಮ ನಡುವೆ 5 ವಿಕೆಟ್‌ ಕಬಳಿಸಿದ್ದು, ಭಾರತ ಮೊದಲ ದಿನವೇ ಮೇಲುಗೈ ಸಾಧಿಸಲು ನೆರವಾದರು. ಲಂಕಾದ ಅತ್ಯಂತ ಅನುಭವಿ ಬ್ಯಾಟರ್‌ ಏಂಜೆಲೋ ಮ್ಯಾಥೂಸ್‌ ಮಾತ್ರ ಕೊಂಚ ಪ್ರತಿರೋಧವೊಡ್ಡಿದರು.

ಬಿರುಸಿನ ಆಟಕ್ಕೆ ಸಿಕ್ಕ ಬೆಲೆ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತಕ್ಕೆ ನಿರೀಕ್ಷಿತ ಆರಂಭವೇನೂ ಸಿಗಲಿಲ್ಲ. ಮಯಾಂಕ್‌ ರನೌಟ್‌ ಆಗಿ ಹೊರನಡೆದರು. ಲಂಕಾ ನಾಯಕ ಕರುಣರತ್ನೆ ಬಹುಬೇಗನೆ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿದರು. ಆಕ್ರಮಣಕಾರಿ ಆಟವಾಡಿದರಷ್ಟೇ ಉಳಿಗಾಲ ಎನ್ನುವುದನ್ನು ಅರಿತ ಭಾರತ, ಬೌಂಡರಿಗಳ ಮೂಲಕ ರನ್‌ ಗಳಿಕೆಗೆ ಹೆಚ್ಚು ಒತ್ತು ನೀಡಿತು. ವಿಹಾರಿ 4, ಕೊಹ್ಲಿ 2, ಪಂತ್‌ 7 ಬೌಂಡರಿ ಬಾರಿಸಿದರು. ಮೊದಲ ಅವಧಿಯಲ್ಲೇ 4 ವಿಕೆಟ್‌ ಬಿದ್ದರೂ, ಭಾರತದ ಯೋಜನೆ ಸರಿಯಿತ್ತು. ಸೊಗಸಾದ ಇನ್ನಿಂಗ್ಸ್‌ ಕಟ್ಟಿದ ಶ್ರೇಯಸ್‌ ಅಯ್ಯರ್‌ ಕೇವಲ 98 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 92 ರನ್‌ ಗಳಿಸಿ ಕೊನೆಯವರಾಗಿ ಔಟಾದರು. ಈ ಪಿಚ್‌ನಲ್ಲಿ ಭಾರತ ಕನಿಷ್ಠ 100 ರನ್‌ ಹೆಚ್ಚುವರಿಯಾಗಿ ಗಳಿಸಿತು ಎಂದೇ ವಿಶ್ಲೇಷಿಸಲಾಯಿತು.

ಕ್ರೀಡಾಂಗಣ ಬಹುತೇಕ ಭರ್ತಿ!

ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್‌ಗೆ (Day and Night Test) ಆತಿಥ್ಯ ವಹಿಸುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ದಿನ ಬಹುತೇಕ ಭರ್ತಿಯಾಗಿತ್ತು. ಭಾನುವಾರದ ಟಿಕೆಟ್‌ಗಳೂ ಸೋಲ್ಡ್‌ಔಟ್‌ ಆಗಿದ್ದು, ಕ್ರೀಡಾಂಗಣ ತುಂಬುವ ನಿರೀಕ್ಷೆ ಇದೆ.

India vs Sri Lanka 2nd Test ಕಪಿಲ್ ದೇವ್ ಜತೆ ಭಾರತ- ಲಂಕಾ ಟೆಸ್ಟ್ ವೀಕ್ಷಿಸಿದ ಬೊಮ್ಮಾಯಿ

ಪಂದ್ಯ ವೀಕ್ಷಿಸಿದ ಸಿಎಂ ಬೊಮ್ಮಾಯಿ

ಶನಿವಾರ ಮೊದಲ ದಿನದಾಟವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸಿದರು. ಭಾರತದ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ರ (Kapil Dev) ಜೊತೆ ಮಾತುಕತೆ ಸಹ ನಡೆಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ: 252/10
ಶ್ರೇಯಸ್ ಅಯ್ಯರ್: 92
ಜಯವಿಕ್ರಮ: 81/3

ಶ್ರೀಲಂಕಾ: 86/6
ಏಂಜಲೋ ಮ್ಯಾಥ್ಯೂಸ್: 43
ಜಸ್ಪ್ರೀತ್ ಬುಮ್ರಾ: 15/3
(* ಮೊದಲ ದಿನದಾಟ ಮುಕ್ತಾಯದ ವೇಳೆಗೆ)

Follow Us:
Download App:
  • android
  • ios