ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ 146 ರನ್‌ಗಳ ಭರ್ಜರಿ ಜಯ ಸಾಧಿಸಿತು. ಸಾಲ್ಟ್ ಅವರ ದಾಖಲೆಯ ಶತಕ ಮತ್ತು ಬಟ್ಲರ್ ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 304 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.
ಮ್ಯಾಂಚೆಸ್ಟರ್: ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಸ್ಫೋಟಕ ಆಟದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಹಲವು ದಾಖಲೆಗಳನ್ನು ಪುಡಿಗಟ್ಟಿದೆ. ನಿಗದಿತ 20 ಓವರ್‌ಗಳಲ್ಲಿ ಇಂಗ್ಲೆಂಡ್ ದಾಖಲೆಯ 304 ರನ್ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಕೇವಲ 158 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಇಂಗ್ಲೆಂಡ್ ತಂಡವು 146 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರ ಜತೆಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇದೀಗ ಸೆಪ್ಟೆಂಬರ್ 14ರಂದು ನಡೆಯಲಿರುವ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಫಿಲ್ ಸಾಲ್ಟ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ವಿಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 7.5 ಓವರ್‌ಗಳಲ್ಲಿ 126 ರನ್‌ಗಳ ಜತೆಯಾಟವಾಡಿತು. ಫಿಲ್ ಸಾಲ್ಟ್ ಕೇವಲ 39 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸುವ ಮೂಲಕ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಇಂಗ್ಲೆಂಡ್ ಬ್ಯಾಟರ್ ಎನ್ನುವ ದಾಖಲೆಗೆ ಪಾತ್ರರಾದರು. ಈ ಮೂಲಕ ಲಿವಿಂಗ್‌ಸ್ಟೋನ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಈ ಮೊದಲು ಲಿಯಾಮ್ ಲಿವಿಂಗ್‌ಸ್ಟೋನ್ 42 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅಂತಿಮವಾಗಿ ಫಿಲ್ ಸಾಲ್ಟ್ 60 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 141 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ವೈಯುಕ್ತಿಕ ಸ್ಕೋರ್ ಬಾರಿಸಿದ ದಾಖಲೆ ಬರೆದರು.
ಇನ್ನು ಮತ್ತೊಂದು ತುದಿಯಲ್ಲಿ ಫಿಲ್ ಸಾಲ್ಟ್‌ಗೆ ಉತ್ತಮ ಸಾಥ್ ನೀಡಿದ ಜೋಸ್ ಬಟ್ಲರ್ ಕೇವಲ 30 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಸ್ಪೋಟಕ 83 ರನ್ ಸಿಡಿಸಿದರು. ಇನ್ನುಳಿದಂತೆ ಜೇಕಬ್ ಬೆಥೆಲ್ 14 ಎಸೆತಕ್ಕೆ 26, ನಾಯಕ ಹ್ಯಾರಿ ಬ್ರೂಕ್ 21 ಎಸೆತಕ್ಕೆ ಔಟಾಗದೆ 41 ರನ್ ಸಿಡಿಸಿದರು.
ಇಂಗ್ಲೆಂಡ್ ಪಾಲಾದ ಅಪರೂಪದ ದಾಖಲೆ
ಇಂಗ್ಲೆಂಡ್ ತಂಡ ಕೇವಲ 2 ವಿಕೆಟ್‌ಗೆ 304 ರನ್ ಕಲೆಹಾಕಿದ್ದು, ಇದು ಅಂತಾರಾಷ್ಟ್ರೀಯ ಟಿ20 ಯಲ್ಲಿ 3ನೇ ಗರಿಷ್ಠ. ಪೂರ್ಣ ಸದಸ್ಯತ್ವ ದೇಶದ ಪೈಕಿ ಇದು ಗರಿಷ್ಠ ಸ್ಕೋರ್. ತಂಡ 12.1 ಓವರ್ ನಲ್ಲೇ 200ರ ಗಡಿ ದಾಟಿತು. ಇದು ಅಂ.ರಾ. ಟಿ20ಯಲ್ಲಿ ಯಾವುದೇ ತಂಡದ ಪೈಕಿ ಗರಿಷ್ಠ ಎನಿಸಿಕೊಂಡಿತು.
ಇನ್ನು ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ 3.4 ಓವರ್‌ನಲ್ಲಿ ನಾಯಕ ಏಯ್ಡನ್ ಮಾರ್ಕ್‌ರಮ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಯಾನ್ ರಿಕೆಲ್ಟನ್ 50 ರನ್‌ಗಳ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮಾರ್ಕ್‌ರಮ್ 20 ಎಸೆತಗಳಲ್ಲಿ 41 ರನ್ ಸಿಡಿಸಿದರು. ಆದರೆ ಇದಾದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ದಕ್ಷಿಣ ಆಫ್ರಿಕಾ ತಂಡವು 158 ರನ್‌ಗಳಿಗೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಜೋಪ್ರಾ ಆರ್ಚರ್ 3 ವಿಕೆಟ್ ಪಡೆದರೆ, ಸ್ಯಾಮ್ ಕರ್ರನ್, ಲಿಯಾಮ್ ಡಾಸನ್ ಹಾಗೂ ವಿಲ್ ಜ್ಯಾಕ್ಸ್ ತಲಾ ಎರಡು ವಿಕೆಟ್ ಪಡೆದರೆ, ಆದಿಲ್ ರಶೀದ್ ಒಂದು ವಿಕೆಟ್ ಪಡೆದರು.
