ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಆಟಗಾರ ಶಡಗೋಪನ್ ರಮೇಶ್ ವಾಗ್ದಾಳಿ ನಡೆಸಿದ್ದು, ತನಗೆ ಇಷ್ಟವಾದವರನ್ನಷ್ಟೇ ಸಪೋರ್ಟ್ ಮಾಡಿ, ಇಷ್ಟವಿಲ್ಲದವರನ್ನು ಕಡೆಗಣಿಸುವ ವ್ಯಕ್ತಿ ಎಂದು ಗಂಭೀರ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

ಚೆನ್ನೈ: ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಆಟಗಾರ ಶಡಗೋಪನ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ. ತನಗೆ ಇಷ್ಟವಾದವರನ್ನಷ್ಟೇ ಸಪೋರ್ಟ್ ಮಾಡಿ, ಇಷ್ಟವಿಲ್ಲದವರನ್ನು ಕಡೆಗಣಿಸುವ ವ್ಯಕ್ತಿ ಎಂದು ಗಂಭೀರ್ ಬಗ್ಗೆ ಶಡಗೋಪನ್ ರಮೇಶ್ ಅಸಮಾಧಾನ ಹೊರಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಡ್ರಾ ಸಾಧಿಸಿದ್ದು ದೊಡ್ಡ ಸಾಧನೆಯೇನಲ್ಲ ಎಂದು ರಮೇಶ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ತನಗೆ ಇಷ್ಟವಾದ ಆಟಗಾರರನ್ನಷ್ಟೇ ಬೆಂಬಲಿಸುವುದು ಗಂಭೀರ್‌ರವರ ರೂಢಿ. ಇಷ್ಟವಿಲ್ಲದವರನ್ನು ಕಡೆಗಣಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದನ್ನು ದೊಡ್ಡ ಸಾಧನೆ ಎಂದು ಆಚರಿಸಲಾಗುತ್ತಿದೆ. ವಿರಾಟ್ ಕೊಹ್ಲಿ- ರವಿಶಾಸ್ತ್ರಿ ಕಾಲದಲ್ಲಿ ವಿದೇಶಗಳಲ್ಲಿ ಭಾರತ ಸರಣಿ ಗೆದ್ದಿತ್ತು. ಆದರೆ ಈಗ ಇಂಗ್ಲೆಂಡ್ ವಿರುದ್ಧದ ಡ್ರಾನೇ ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಇದು ಗಂಭೀರ್ ಕೋಚ್ ಆದ ಮೇಲಿನ ದೊಡ್ಡ ಸಾಧನೆ ಅಷ್ಟಕ್ಕಷ್ಟೇ ಎಂದು ರಮೇಶ್ ಹೇಳಿದ್ದಾರೆ.

ಗೌತಮ್ ಗಂಭೀರ್ ಕೋಚಿಂಗ್ ವೃತ್ತಿಜೀವನದ ದೊಡ್ಡ ಸಾಧನೆಯೆಂದರೆ ಅದು 2025ರ ಚಾಂಪಿಯನ್ಸ್ ಟ್ರೋಫಿ ಗೆಲುವು. ಆದರೆ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೇಯಸ್ ಅಯ್ಯರ್‌ರನ್ನು ಏಷ್ಯಾಕಪ್ ತಂಡದಿಂದ ಕೈಬಿಡಲಾಗಿದೆ. ಅಲ್ಲದೆ, ತಂಡದ ಎಕ್ಸ್ ಫ್ಯಾಕ್ಟರ್ ಎನಿಸಿದ್ದ ಯಶಸ್ವಿ ಜೈಸ್ವಾಲ್‌ರನ್ನೂ ಕೈಬಿಡಲಾಗಿದೆ. ಮೂರು ಮಾದರಿಯಲ್ಲೂ ಆಡಬಲ್ಲ ಯಶಸ್ವಿ ಜೈಸ್ವಾಲ್‌ರನ್ನು ಸ್ಟ್ಯಾಂಡ್‌ಬೈ ಆಗಿ ಇರಿಸಿದ್ದು ತಪ್ಪು ಎಂದು ಶಡಗೋಪನ್ ರಮೇಶ್ ಹೇಳಿದ್ದಾರೆ. ಈ ವರ್ಷ ಯುಎಇಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದ ಶ್ರೇಯಸ್‌ಗೆ ಬೆಂಬಲ ನೀಡಬೇಕಿತ್ತು ಎಂದು ರಮೇಶ್ ಹೇಳಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ 243 ರನ್ ಬಾರಿಸುವ ಮೂಲಕ ಭಾರತ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಅಯ್ಯರ್ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ಪರ 600ಕ್ಕೂ ಅಧಿಕ ರನ್ ಬಾರಿಸಿದ್ದೂ ಅಲ್ಲದೇ ತಂಡವನ್ನು ಫೈನಲ್‌ಗೂ ಕೊಂಡೊಯ್ದಿದ್ದರು.

ಭಾರತದ ಪರ 51 ಟಿ20 ಪಂದ್ಯಗಳನ್ನಾಡಿರುವ ಶ್ರೇಯಸ್ ಅಯ್ಯರ್ 30.66 ಸರಾಸರಿಯಲ್ಲಿ 1,104 ರನ್ ಗಳಿಸಿದ್ದಾರೆ. ಆದರೆ 2023ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದೇ ಶ್ರೇಯಸ್ ಕೊನೆಯ ಟಿ20 ಪಂದ್ಯ. 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ಶ್ರೇಯಸ್ 2020ರಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. 2024ರಲ್ಲಿ ಕೆಕೆಆರ್‌ಗೆ ಚಾಂಪಿಯನ್ ಪಟ್ಟ ತಂದುಕೊಟ್ಟರೂ, ತಂಡದಿಂದ ಕೈಬಿಡಲಾಯಿತು. ಬಳಿಕ ಪಂಜಾಬ್ ಕಿಂಗ್ಸ್‌ ತಂಡ ಸೇರಿದ ಶ್ರೇಯಸ್, 13 ವರ್ಷಗಳ ಬಳಿಕ ತಂಡವನ್ನು ಫೈನಲ್ ತಲುಪಿಸಿದರು. ಕಳೆದ ಐಪಿಎಲ್‌ನಲ್ಲಿ 17 ಪಂದ್ಯಗಳಿಂದ 604 ರನ್ ಗಳಿಸಿದ್ದರೂ, ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಗದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:

ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್‌ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.