ಸಚಿನ್, ವಿರಾಟ್, ಗಂಭೀರ್ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಬಾಂಗ್ಲಾದೇಶ ನಡುವೆ ನಡೆದ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಸೂಪರ್ ಸೆಂಚುರಿಯೊಂದಿಗೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ದಾಖಲೆಗಳನ್ನು ಮುರಿದರು. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

ಶುಭ್‌ಮನ್ ಗಿಲ್, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಬ್ಯಾಟಿಂಗ್ ನಲ್ಲಿ ಮಿಂಚಿದ್ದರಿಂದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿತು.
ಭಾರತ ತಂಡದ ಗೆಲುವಿನಲ್ಲಿ ಶುಭ್‌ಮನ್ ಗಿಲ್ (101 ರನ್*), ಮೊಹಮ್ಮದ್ ಶಮಿ (5 ವಿಕೆಟ್) ಹೀರೋಗಳಾಗಿ ನಿಂತರು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಮಿಂಚಿದ್ದರಿಂದ ಭಾರತ ಸುಲಭ ಗೆಲುವು ಸಾಧಿಸಿತು.
ಈ ಪಂದ್ಯದಲ್ಲಿ ಭಾರತದ ಉಪನಾಯಕ ಶುಭ್‌ಮನ್ ಗಿಲ್ ಶತಕದೊಂದಿಗೆ ಅಬ್ಬರಿಸಿದರು. ಈ ಶತಕದ ಇನ್ನಿಂಗ್ಸ್ ನಂತರ ಅನೇಕ ದಾಖಲೆಗಳನ್ನು ಮುರಿದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.
ಶುಭಮನ್ ಗಿಲ್
ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ 8ನೇ ಶತಕ ಗಳಿಸಿದ ಶುಭ್ ಮನ್ ಗಿಲ್
ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಆರಂಭದಿಂದಲೂ ಬೌಲರ್ ಗಳ ಮೇಲೆ ಮುಗಿಬಿದ್ದರು. ಬೌಂಡರಿ, ಸಿಕ್ಸರ್ ಬಾರಿಸುತ್ತಾ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ 8ನೇ ಶತಕವನ್ನು ಗಳಿಸಿದರು. ಗಿಲ್ 129 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 101 ರನ್ ಗಳಿಸಿ ಭಾರತವನ್ನು ಗೆಲ್ಲಿಸಿ ಅಜೇಯರಾಗಿ ಉಳಿದರು.
25 ವರ್ಷದ ಗಿಲ್ ಅವರ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಇದು 14ನೇ ಶತಕ. ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಭಾರತ, ಇಂಗ್ಲೆಂಡ್ ನಡುವೆ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಗಿಲ್ ಶತಕ ಗಳಿಸಿದ್ದರು.
ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ ಗಿಲ್
ಇಂಡಿಯಾ-ಬಾಂಗ್ಲಾದೇಶ ಪಂದ್ಯದಲ್ಲಿ ಶತಕದೊಂದಿಗೆ ಮಿಂಚಿದ ಶುಭ್‌ಮನ್ ಗಿಲ್, ಭಾರತದ ಪರವಾಗಿ ಅತಿ ವೇಗವಾಗಿ 8 ಏಕದಿನ ಶತಕಗಳನ್ನು ಗಳಿಸಿದ ವಿಶೇಷ ಕ್ಲಬ್ ಸೇರಿದ್ದಾರೆ. ಹಾಗೆಯೇ, ಸಚಿನ್, ಗಂಭೀರ್, ವಿರಾಟ್, ಶಿಖರ್ ಧವನ್ ಅವರನ್ನು ಹಿಂದಿಕ್ಕಿದ್ದಾರೆ. ಇನ್ನಿಂಗ್ಸ್ ಗಳ ಪ್ರಕಾರ ಗಿಲ್ ಭಾರತದ ಪರವಾಗಿ ಏಕದಿನದಲ್ಲಿ 8 ಶತಕಗಳನ್ನು ಪೂರ್ಣಗೊಳಿಸಿದ ಅತಿ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರು 51 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಶಿಖರ್ ಧವನ್ ಹೆಸರಿನಲ್ಲಿತ್ತು. ಅವರು 57 ಇನ್ನಿಂಗ್ಸ್‌ಗಳಲ್ಲಿ ಎಂಟು ಏಕದಿನ ಶತಕಗಳನ್ನು ಗಳಿಸಿದ್ದರು. ವಿರಾಟ್ ಕೊಹ್ಲಿ 68 ಇನ್ನಿಂಗ್ಸ್‌ಗಳಲ್ಲಿ, ಗೌತಮ್ ಗಂಭೀರ್ 68 ಇನ್ನಿಂಗ್ಸ್‌ಗಳಲ್ಲಿ, ಸಚಿನ್ ತೆಂಡೂಲ್ಕರ್ 111 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಶುಭಮನ್ ಗಿಲ್ (ಫೋಟೋ: ಐಸಿಸಿ)
ಭಾರತದ ಪರವಾಗಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 8 ಏಕದಿನ ಶತಕಗಳು
51 - ಶುಭ್‌ಮನ್ ಗಿಲ್
57 - ಶಿಖರ್ ಧವನ್
68 - ವಿರಾಟ್ ಕೊಹ್ಲಿ
98 - ಗೌತಮ್ ಗಂಭೀರ್
111 - ಸಚಿನ್ ತೆಂಡೂಲ್ಕರ್
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತಕ್ಕೆ ಮೊದಲ ಜಯ
ಈ ಪಂದ್ಯದಲ್ಲಿ ಭಾರತ ತಂಡ ಫೀಲ್ಡಿಂಗ್ ನಲ್ಲಿ ಕೆಲವು ತಪ್ಪುಗಳನ್ನು ಮಾಡಿದರೂ ಬೌಲಿಂಗ್, ಬ್ಯಾಟಿಂಗ್ ನಲ್ಲಿ ಮಿಂಚುತ್ತಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಜಯವನ್ನು ಪಡೆಯಿತು. ಬಾಂಗ್ಲಾದೇಶವನ್ನು 6 ವಿಕೆಟ್ ಗಳ ಅಂತರದಿಂದ ಸೋಲಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಅನ್ನು ಭರ್ಜರಿಯಾಗಿ ಆರಂಭಿಸಿತು.
ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿಯಿತು. ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಭಾರತದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ಬೌಲಿಂಗ್ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಶಮಿ 53 ರನ್ ನೀಡಿ ಐದು ವಿಕೆಟ್ ಪಡೆದರು. ಬಾಂಗ್ಲಾದೇಶ 49.4 ಓವರ್ ಗಳಲ್ಲಿ 228 ರನ್ ಗಳಿಗೆ ಆಲೌಟ್ ಆಯಿತು. ಗಿಲ್ ಶತಕದೊಂದಿಗೆ 46.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.