'ವಿಶ್ವಕಪ್ ಪ್ರಶಸ್ತಿ ಪ್ರದಾನ ಅತ್ಯಂತ ಅಯೋಗ್ಯ ಟ್ರೋಫಿ ಪ್ರಸ್ತುತಿ': ಕಮಿನ್ಸ್ ಪಾಡು ಕೇಳೋರಿಲ್ಲ
ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ಮರ್ಲೆಸ್, ಆಸೀಸ್ ನಾಯಕ ಪ್ಯಾಟ್ ಕಮಿನ್ಸ್‌ಗೆ ಟ್ರೋಫಿ ಹಸ್ತಾಂತರಿಸಿದರು. ಇದಾದ ಬಳಿಕ ಹಸ್ತಲಾಘವ ಮಾಡಿ ಮೋದಿ ಹಾಗೂ ಮರ್ಲೆಸ್ ಇಬ್ಬರು ವೇದಿಕೆಯಿಂದ ಕೆಳಗಿಳಿದು ಹೋದರು.
ಅಹಮದಾಬಾದ್(ನ.22): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮಣಿಸಿದ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಪ್ರಶಸ್ತಿ ಪ್ರದಾನ ಸಮಾರಂಭವು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದೊಂದು ಅತ್ಯಂತ ಅಯೋಗ್ಯ ಟ್ರೋಫಿ ಪ್ರಸ್ತುತಿ ಎನ್ನುವ ಮಾತುಗಳು ಕೇಳಿ ಬಂದಿವೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ ಎದುರು ಅದ್ಭುತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಳೆದ ಮೂರು ಏಕದಿನ ಆವೃತ್ತಿಗಳಲ್ಲಿ ಆತಿಥ್ಯ ವಹಿಸಿದ ದೇಶವೇ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಈ ಬಾರಿ ಭಾರತ ವಿಶ್ವಕಪ್ ಗೆಲ್ಲಲಿದೆ ಎನ್ನುವ ಆಸೆ ಅಭಿಮಾನಿಗಳಲ್ಲಿ ಗರಿಗೆದರಿತ್ತು.
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಮ್ಯಾನೇಜರ್ ಕನ್ನಡತಿ..!
ಅದರಲ್ಲೂ ಲೀಗ್ ಹಂತದಿಂದಲೂ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗುವ ಮೂಲಕ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಈ ಮೂಲಕ ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಭಾರತದ ಕನಸು ನುಚ್ಚು ನೂರಾಯಿತು. ಭಾರತ 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಪದೇ ಪದೇ ಐಸಿಸಿ ಟೂರ್ನಿಗಳಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲುತ್ತಲೇ ಬಂದಿದೆ.
ಕಪ್ ಗೆದ್ದ ಪ್ಯಾಟ್ ಕಮಿನ್ಸ್ ತಬ್ಬಿಬ್ಬು: ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ಮರ್ಲೆಸ್, ಆಸೀಸ್ ನಾಯಕ ಪ್ಯಾಟ್ ಕಮಿನ್ಸ್‌ಗೆ ಟ್ರೋಫಿ ಹಸ್ತಾಂತರಿಸಿದರು. ಇದಾದ ಬಳಿಕ ಹಸ್ತಲಾಘವ ಮಾಡಿ ಮೋದಿ ಹಾಗೂ ಮರ್ಲೆಸ್ ಇಬ್ಬರು ವೇದಿಕೆಯಿಂದ ಕೆಳಗಿಳಿದು ಹೋದರು. ಇದಾದ ಬಳಿಕ ಕಪ್ ಕೈಯಲ್ಲಿ ಹಿಡಿದ ಪ್ಯಾಟ್ ಕಮಿನ್ಸ್, ಸುಮಾರು 30 ಸೆಕೆಂಡ್‌ಗಳ ಕಾಲ ಮೋದಿ ಹಾಗೂ ಮರ್ಲೆಸ್ ಅವರನ್ನೇ ದಿಟ್ಟಿಸಿ ತಬ್ಬಿಬ್ಬಾದಂತೆ ನೋಡುತ್ತಾ ನಿಂತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಏಕದಿನ ವಿಶ್ವಕಪ್‌ಗೆ 12.5 ಲಕ್ಷ ಪ್ರೇಕ್ಷಕರು: ಹೊಸ ದಾಖಲೆ..!
ಇದರ ಬೆನ್ನಲ್ಲೇ ಹಲವರು ಇದೊಂದು ಅತ್ಯಂತ ಕೆಟ್ಟ ಪ್ರಶಸ್ತಿ ಪ್ರದಾನ ಸಮಾರಂಭವಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ವಿಶ್ವಕಪ್ ಪಂದ್ಯ ವೀಕ್ಷಿಸಲು ಬಂದಿದ್ದ ಭಾರತದ ಬಹುತೇಕ ಫ್ಯಾನ್ಸ್, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಣ್ತುಂಬಿಕೊಳ್ಳದೇ ನಿರಾಶರಾಗಿ ಮನೆಯತ್ತ ಹೆಜ್ಜೆಹಾಕಿದರು. ಹೀಗಾಗಿ ಇದೊಂದು ನಿರಾಶಾದಾಯಕ ಪ್ರಶಸ್ತಿ ಪ್ರದಾನ ಸಮಾರಂಭದಂತೆ ಕಂಡು ಬಂದಿತು.