34 ವರ್ಷದ ಊರ್ಮಿಳಾ, ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಊರ್ಮಿಳಾ ಜನಿಸಿದ್ದು ದೋಹಾದಲ್ಲಿ, ಅವರ ತಂದೆ, ತಾಯಿ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಮಂಗಳೂರು(ನ.22): ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ವ್ಯವಸ್ಥಾಪಕಿ ಕರ್ನಾಟಕ ಮೂಲದವರು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೊ ಆಸ್ಟ್ರೇಲಿಯಾದ ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದರು.

34 ವರ್ಷದ ಊರ್ಮಿಳಾ, ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಊರ್ಮಿಳಾ ಜನಿಸಿದ್ದು ದೋಹಾದಲ್ಲಿ, ಅವರ ತಂದೆ, ತಾಯಿ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. 7 ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದ ಅವರು, ಈಗ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನೆಲೆಸಿದ್ದಾರೆ. ಊರ್ಮಿಳಾ ಅಮೆರಿಕದ ಕಾರ್ನೆಗಿ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವೀಧರರು. ತಮ್ಮ ಬಾಲ್ಯದಿಂದಲೂ ಕ್ರೀಡಾ ಪಟುವಾಗಿದ್ದ ಊರ್ಮಿಳಾ, ಕತಾರ್ ಟೆನಿಸ್ ಫೆಡರೇಷನ್‌ನೊಂದಿಗೆ 3 ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ಅವರು ಮೊದಲು ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷ ಕಾರ್ಯನಿರ್ವಹಿಸಿದ್ದರು.

ಏಕದಿನ ವಿಶ್ವಕಪ್‌ಗೆ 12.5 ಲಕ್ಷ ಪ್ರೇಕ್ಷಕರು: ಹೊಸ ದಾಖಲೆ..!

ಆನಂತರ ಅವರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ವ್ಯವಸ್ಥಾಪಕಿ ಆಗಿ ಬಡ್ತಿ ಪಡೆದರು. ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ನಾಲ್ಕು ತಿಂಗಳ ಕಾಲ ಕತಾರ್‌ನಲ್ಲಿ ಫುಟ್ಬಾಲ್ ಕ್ರೀಡಾಂಗಣದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು. ಬಳಿಕ ಈ ವರ್ಷದ ಸೆಪ್ಟೆಂಬರ್ ನಲ್ಲಿ ಕತಾರ್‌ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ವಿಶ್ವಕಪ್ ಗಾಗಿ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡದ ನೇತೃತ್ವ ವಹಿಸಿಕೊಂಡಿದ್ದರು.

ಮರಳಿ ಮಹಿಳಾ ತಂಡಕ್ಕೆ: ಆಸ್ಟ್ರೇಲಿಯಾ ವಿಶ್ವಕಪ್ ನಿರ್ವಹಣೆಗೆ ಪುರುಷರ ತಂಡದೊಂದಿಗೆ ಭಾರತಕ್ಕೆ ಬಂದಿದ್ದ ಊರ್ಮಿಳಾ ಶೀಘ್ರವೇ ಮತ್ತೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಸೇರಲಿದ್ದಾರೆ. ಆ ತಂಡದ ಜತೆ ಡಿಸೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

10ರಲ್ಲಿ ಪಾಸಾಗಿ 11ರಲ್ಲಿ ಫೇಲಾದ್ರಾ ರೋಹಿತ್ ಶರ್ಮಾ..? ಟೀಂ ಇಂಡಿಯಾ ಕ್ಯಾಪ್ಟನ್ ಮಾಡಿದ ಯಡವಟ್ಟೇನು?

6ನೇ ಬಾರಿಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಟೀಂ ಇಂಡಿಯಾ ಎದುರು 6 ವಿಕೆಟ್ ಭರ್ಜರಿ ಗೆಲುವು ಸಾಧಿಸುವ ಮೂಲಕ ದಾಖಲೆಯ 6ನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಜೇಯವಾಗಿಯೇ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಭಾರತ ಎದುರು ಸಂಘಟಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಟೀಂ ಇಂಡಿಯಾಗೆ ಸೋಲುಣಿಸುವಲ್ಲಿ ಯಶಸ್ವಿಯಾಯಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವನ್ನು ಕೇವಲ 240 ರನ್‌ಗಳಿಗೆ ಆಲೌಟ್ ಮಾಡಿದ ಪ್ಯಾಟ್ ಕಮಿನ್ಸ್‌ ಪಡೆ, ಆ ಬಳಿಕ ಆರಂಭಿಕ ಆಘಾತದ ಹೊರತಾಗಿಯೂ ಟ್ರಾವಿಸ್ ಹೆಡ್ ಬಾರಿಸಿದ ಶತಕ ಹಾಗೂ ಮಾರ್ನಸ್ ಲಬುಶೇನ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಆಸೀಸ್ ತಂಡವು ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.