ಕ್ರಿಕೆಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವು ಸ್ಮೃತಿಯ ತಂದೆಯ ಹಠಾತ್ ಅನಾರೋಗ್ಯದ ಕಾರಣ ಮುಂದೂಡಲ್ಪಟ್ಟಿದೆ. ಈ ನಡುವೆ, ಸ್ಮೃತಿ ಸೋಶಿಯಲ್ ಮೀಡಿಯಾದಿಂದ ಮದುವೆಯ ಪೋಸ್ಟ್‌ಗಳನ್ನು ಅಳಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮುಂಬೈ: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ಮುಂದೂಡಿಕೆಯ ಬಗ್ಗೆ ಪಲಾಶ್ ಅವರ ಸಹೋದರಿ ಪಲಕ್ ಮುಚ್ಚಲ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಸ್ಮೃತಿ ಮಂಧನಾ ಅವರ ತಂದೆಯ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮದುವೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಮತ್ತು ಈ ಕಷ್ಟದ ಸಮಯದಲ್ಲಿ ಎಲ್ಲರೂ ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸಬೇಕು ಎಂದು ಪಲಕ್ ಮುಚ್ಚಲ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಸ್ಮೃತಿ ಮಂಧನಾ-ಪಲಾಶ್ ದಿಢೀರ್ ಸ್ಥಗಿತ
ಭಾನುವಾರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸ್ಮೃತಿ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ನಡೆಯಬೇಕಿತ್ತು. ಆದರೆ ಮದುವೆಯ ದಿನದಂದೇ ಸ್ಮೃತಿಯ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಹೀಗಾಗಿ ಮದುವೆಯನ್ನು ಮುಂದೂಡಲಾಯಿತು. ಬೆಳಗಿನ ಉಪಾಹಾರ ಸೇವಿಸುವಾಗ ಶ್ರೀನಿವಾಸ್ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೃದಯಾಘಾತವಾಗಿರುವುದನ್ನು ಖಚಿತಪಡಿಸಲಾಯಿತು. ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ಶ್ರೀನಿವಾಸ್ ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀನಿವಾಸ್ ಮಂಧಾನ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ, ಪಲಾಶ್ ಮುಚ್ಚಲ್ ಕೂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈರಲ್ ಸೋಂಕು ಮತ್ತು ಜೀರ್ಣಕಾರಿ ಸಮಸ್ಯೆಗಳಿಂದಾಗಿ ಮುಚ್ಚಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮುಚ್ಚಲ್ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಮದುವೆ ಮುಂದೂಡಿದ್ದರಿಂದ ಪಲಾಶ್ ಮುಚ್ಚಲ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು, ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ಅವರ ತಾಯಿ ಅಮಿತಾ ಮುಚ್ಚಲ್ ಹೇಳಿದ್ದರು.
ಚರ್ಚೆಗೆ ಗ್ರಾಸವಾದ ಸ್ಮೃತಿಯ ನಡೆ
ತಂದೆ ಮತ್ತು ಪಲಾಶ್ ಆಸ್ಪತ್ರೆಗೆ ದಾಖಲಾದ ನಂತರ, ಸ್ಮೃತಿ ಮಂಧನಾ ಅವರು ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು. ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಸ್ಮೃತಿ ಸೋಶಿಯಲ್ ಮೀಡಿಯಾದಿಂದ ಅಳಿಸಿಹಾಕಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮಧ್ಯದಲ್ಲಿ ಪಲಾಶ್ ಮುಚ್ಚಲ್ ಪ್ರಪೋಸ್ ಮಾಡಿದ ವೀಡಿಯೊವನ್ನು ಕೂಡ ಸ್ಮೃತಿ ಡಿಲೀಟ್ ಮಾಡಿದ್ದರು. ಸ್ಮೃತಿ ಜೊತೆಗೆ, ಅವರ ಆಪ್ತ ಸ್ನೇಹಿತರಾದ ಜೆಮಿಮಾ ರೋಡ್ರಿಗ್ಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಸ್ಮೃತಿ ಮದುವೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಹಾಕಿದ್ದರು. ಆದರೆ, ಪಲಾಶ್ ಮುಚ್ಚಲ್ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇವೆಲ್ಲವೂ ಇನ್ನೂ ಲಭ್ಯವಿದೆ.
ಇನ್ನು ಇದೆಲ್ಲದರ ನಡುವೆ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಲ್ ಅವರ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದು, ಮದುವೆ ಮುಂದುವರೆಯುವುದೇ ಅನುಮಾನ ಎನಿಸಿದೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.


