ಕರಾಚಿ(ಏ.28): ಪಾಕಿಸ್ತಾನ ಮಧ್ಯಮ ಕ್ರಮಾಂಕದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಉಮರ್‌ ಅಕ್ಮಲ್‌ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ 3 ವರ್ಷಗಳ ಕಾಲ ನಿಷೇಧ ಹೇರಿದೆ. 

ಪಿಸಿಬಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದು, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಉಮರ್ ಅಕ್ಮಲ್ ಅವರಿಗೆ 3 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿ ಶಿಸ್ತು ಸಮಿತಿಯ ಮುಖ್ಯಸ್ಥ ಹಾಗೂ ನಿವೃತ್ತ ನ್ಯಾಯಾಧೀಶರಾದ ಫಜಲ್-ಇ-ಮಿರಾನ್ ಚೌಹ್ಹಾಣ್ ಆದೇಶ ಹೊರಡಿಸಿದ್ದಾರೆ ಎಂದು ಟ್ವೀಟ್ ಮಾಡಿದೆ.

ಉಮರ್ ಅಕ್ಮಲ್ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಕೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು.. ಆದರೆ 2020ನೇ ಆವೃತ್ತಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನವೇ ಆತನನ್ನು ಕ್ರಿಕೆಟ್‌ನಿಂದ ದೂರ ಉಳಿಯುವಂತೆ ಪಿಸಿಬಿ ಸೂಚಿಸಿತ್ತು. ಇದೀಗ ಉಮರ್‌ ಅಕ್ಮಲ್‌ಗೆ 3 ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ದೂರ ಉಳಿಯುವಂತೆ ಪಿಸಿಬಿ ತಾಕೀತು ಮಾಡಿದೆ. 29 ವರ್ಷದ  ಉಮರ್‌ ಅಕ್ಮಲ್‌ ಪಾಕಿಸ್ತಾನ ಪರ 53 ಟೆಸ್ಟ್‌, 58 ಟಿ20 ಮತ್ತು 157 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಪಾಕ್‌ ಕ್ರಿಕೆಟಿಗ ಉಮರ್‌ಗೆ ಜೀವಾವಧಿ ನಿಷೇಧ ಸಾಧ್ಯತೆ..!

ಅಕ್ಮಲ್ ಮೇಲೆ ಪಾಕ್ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಕಿಡಿಕಾರಿದ್ದಾರೆ. ಅಂತೂ ಉಮರ್ ಅಕ್ಮಲ್ ಈಡಿಯಟ್ಸ್‌ಗಳ ಸಾಲು ಸೇರಿದಂತಾಯ್ತು. 3 ವರ್ಷಗಳ ನಿಷೇಧ. ಎಂಥಾ ಅದ್ಭುತ ಪ್ರತಿಭೆ ವ್ಯರ್ಥವಾಯಿತು. ಮ್ಯಾಚ್‌ ಫಿಕ್ಸಿಂಗ್ ವಿಚಾರದಲ್ಲಿ ಕಾನೂನು ತಿದ್ದುಪಡಿ ತಂದು ಕಠಿಣ ಶಿಕ್ಷೆ ಜಾರಿಗೆ ತರಲು ಪಾಕಿಸ್ತಾನಕ್ಕಿದು ಸಕಾಲ ಎಂದು ಟ್ವೀಟ್ ಮಾಡಿದ್ದಾರೆ.