೨೦೨೫ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ಆರಂಭ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಫೆಬ್ರವರಿ 23ರಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ. ಪಾಕ್ ಪ್ರಧಾನಿ ಶರೀಫ್, ಚಾಂಪಿಯನ್ಸ್ ಟ್ರೋಫಿ ಜೊತೆಗೆ ಭಾರತವನ್ನು ಸೋಲಿಸುವುದು ಗುರಿ ಎಂದಿದ್ದಾರೆ. ಟಾಪ್ 8 ತಂಡಗಳು ಸ್ಪರ್ಧಿಸಲಿದ್ದು, ಭಾರತ 'ಎ' ಗುಂಪಿನಲ್ಲಿದೆ.

ಕರಾಚಿ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಇದೇ ಫೆಬ್ರವರಿ 19ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿದೆ. ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಈ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದು, ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಭಾರತ ತಂಡವು ಚಾಂಪಿಯನ್ಸ್‌ ಟ್ರೋಫಿಯನ್ನಾಡಲು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕಿದೆ. ಹೀಗಾಗಿ ಭಾರತದ ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. 

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಹಾಗೂ ಲಾಹೋರ್‌ನಲ್ಲಿ ನಡೆಯುವುದರ ಜತೆಗೆ ಯುಎಇನ ದುಬೈನಲ್ಲೂ ಪಂದ್ಯಾಟಗಳು ನಡೆಯಲಿವೆ. ಇನ್ನು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾಗಿ ಗುರುತಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೆಬ್ರವರಿ 23ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಇದೆಲ್ಲದರ ನಡುವೆ ಪಾಕಿಸ್ತಾನ ಪ್ರಧಾನಿ ಆಡಿದ ಒಂದು ಮಾತು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಪಾಕ್ ಪ್ರಧಾನಿ ಹೇಳಿದ್ದೇನು?

ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿ ಹೈವೋಲ್ಟೇಜ್ ಪಂದ್ಯದ ಕುರಿತಂತೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಮೊಹಮ್ಮದ್ ರಿಜ್ವಾನ್ ಅವರ ಮುಂದಿನ ಗುರಿ ಕೇವಲ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವುದಷ್ಟೇ ಅಲ್ಲ ಬದಲಾಗಿ ಫೆಬ್ರವರಿ 23ರಂದು ನಡೆಯಲಿರುವ ಪಂದ್ಯದಲ್ಲಿ ಭಾರತವನ್ನು ಸೋಲಿಸುವತ್ತ ಗಮನವಿರಲಿ ಎಂದು ಹೇಳಿದ್ದಾರೆ. ಅಂದಹಾಗೆ 2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿ ಪಾಕಿಸ್ತಾನ ತಂಡವು ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

'ನಮ್ಮ ತಂಡ ತುಂಬಾ ಚೆನ್ನಾಗಿದೆ. ಇತ್ತೀಚಿಗಿನ ದಿನಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗ ನಮ್ಮ ಮುಂದಿರುವ ನಿಜವಾದ ಸವಾಲು ಏನೆಂದರೆ ಕೇವಲ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದಷ್ಟೇ ಅಲ್ಲ ಇದರ ಜತೆಗೆ ದುಬೈನಲ್ಲಿ ನಡೆಯಲಿರುವ ನಮ್ಮ ಬದ್ದ ಎದುರಾಳಿ ಭಾರತವನ್ನು ಸೋಲಿಸಬೇಕು. ಭಾರತವನ್ನು ಸೋಲಿಸಲು ಇಡೀ ದೇಶವೇ ಪಾಕಿಸ್ತಾನದ ಜತೆಗೆ ನಿಲ್ಲಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಹೇಳಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ತಂಡಗಳ ಪೈಕಿ ಟಾಪ್ 8 ಸ್ಥಾನ ಪಡೆದ ತಂಡಗಳು ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಇನ್ನು ಪಾಕಿಸ್ತಾನ ಬರೋಬ್ಬರಿ 3 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತನ್ನ ನೆಲದಲ್ಲಿ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. 

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿವೆ. ಇದೇ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಭಾರತ ತಂಡವು ಜನವರಿ 20ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಾದ ಬಳಿಕ ಫೆಬ್ರವರಿ 23ರಂದು ಪಾಕಿಸ್ತಾನ ಎದುರು ಹಾಗೂ ಮಾರ್ಚ್‌ 02ರಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. 

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಶದೀಪ್ ಸಿಂಗ್ ಹಾಗೂ ವಾಷಿಂಗ್ಟನ್ ಸುಂದರ್.