ಇಸ್ಲಾಮಾಬಾದ್‌[ಡಿ.27]: ನೆರೆಯ ಪಾಕಿಸ್ತಾನ, ಆಷ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಬೇಸತ್ತು ಭಾರತಕ್ಕೆ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ಕಲ್ಪಿಸುವ ಮಹತ್ವದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಹಿಂಸಾಚಾರದ ಪ್ರತಿಭಟನೆಗಳ ಬೆನ್ನಲ್ಲೇ, ಪಾಕಿಸ್ತಾನದಂಥ ರಾಷ್ಟ್ರಗಳಲ್ಲಿ ಮುಸ್ಲಿಮೇತರರು ಅಥವಾ ಅಲ್ಪಸಂಖ್ಯಾತರು ಹೇಗೆಲ್ಲಾ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂಬುದಕ್ಕೆ ಪೂರಕ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಈ ಹಿಂದೆ ಪಾಕಿಸ್ತಾನದ ಕ್ರಿಕೆಟ್‌ ತಂಡದಲ್ಲಿದ್ದ ದನಿಶ್‌ ಕನೇರಿಯಾ ಅವರು ಹಿಂದೂ ಸಮುದಾಯಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕಾಗಿ ಅವರ ಕ್ರಿಕೆಟ್‌ ಬದುಕನ್ನೇ ಪಾಕಿಸ್ತಾನ ಕ್ರಿಕೆಟ್‌ ಆಟಗಾರರು(ಮುಸ್ಲಿಮರು)ಹಾಳು ಮಾಡಿದ್ದರು ಎಂಬ ಕಹಿ ಸತ್ಯವನ್ನು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಶೋಯೆಬ್‌ ಅಖ್ತರ್‌ ಬಿಚ್ಚಿಟ್ಟಿದ್ದಾರೆ. ಈ ಸ್ಫೋಟಕ ಹೇಳಿಕೆಯನ್ನು ಕನೇರಿಯಾ ದೃಢೀಕರಿಸಿದ್ದು, ಹಿಂದು ಎಂಬ ಕಾರಣಕ್ಕೆ ನನ್ನ ಜೊತೆ ಮಾತನಾಡಲೂ ದ್ವೇಷಿಸುತ್ತಿದ್ದ ಪಾಕ್‌ ಕ್ರಿಕೆಟಿಗರ ಹೆಸರನ್ನೂ ಬಹಿರಂಗಪಡಿಸುವೆ ಎಂದಿದ್ದಾರೆ.

ಗೇಮ್‌ ಆನ್‌ ಹೈ ಎಂಬ ಶೋನಲ್ಲಿ ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ಅಖ್ತರ್‌, ಕ್ರೈಸ್ತನಾಗಿದ್ದ ಯೂಸಫ್‌ ಯೊಹಾನಾ(ಈಗ ಮೊಹಮ್ಮದ್‌ ಯೊಹಾನಾ) ಅವರು ಸಹ ಆಟಗಾರರ ಕಿರುಕುಳದಿಂದ ನೊಂದು ಇಸ್ಲಾಂಗೆ ಮತಾಂತರವಾಗಿದ್ದರು ಎಂದು ಹೇಳಿದರು.