ಪಾಕ್ ಸ್ಪಿನ್ ಲೆಜೆಂಡ್ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ. ಕುಂಬ್ಳೆಯನ್ನು ದೊಡ್ಡಣ ಎಂದು ಕರೆದಿದ್ದಾರೆ. ಯಾರು ಆ ಲೆಜೆಂಡ್.? ಕುಂಬ್ಳೆ ಮಾಡಿದ ಸಹಾಯ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಬೆಂಗಳೂರು(ಏ.13): ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಬಹುತೇಕ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗಿ ಬಿಡುತ್ತದೆ. ಉಭಯ ದೇಶಗಳ ಅಭಿಮಾನಿಗಳು ತಮ್ಮ ತಂಡ ಗೆಲ್ಲಲಿ, ನನ್ನ ನೆಚ್ಚಿನ ಆಟಗಾರ ಒಳ್ಳೆಯ ಆಟವಾಡಲಿ ಎಂದು ಪ್ರಾರ್ಥಿಸುತ್ತಿರುತ್ತಾರೆ. ಇಂಡೋ-ಪಾಕ್ ಪಂದ್ಯ ಕೇವಲ ಕ್ರಿಕೆಟ್ ಆಟವಲ್ಲ, ಬದಲಾಗಿ ಸಾಂಪ್ರದಾಯಿಕ ಎದುರಾಳಿಗಳ ಕದನವಾಗಿ ಬದಲಾಗಿರುತ್ತದೆ. ಮೈದಾನದಲ್ಲಿ ಗೆಲುವಿಗಾಗಿ ಉಭಯ ತಂಡದ ಆಟಗಾರರು ಕೊನೆಯ ಕ್ಷಣದವರೆಗೂ ಹೋರಾಡುತ್ತಾರೆ, ಆದರೆ ಮೈದಾನದಾಚೆಗೆ ಈ ಆಟಗಾರರು ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.
ಒಂದು ಕಂಡೀಷನ್ ಮೇಲೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ ದಿಗ್ಗಜ ಅನಿಲ್ ಕುಂಬ್ಳೆ!
ಇಡೀ ಜಗತ್ತೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದ ಸ್ಪಿನ್ ಲೆಜೆಂಡ್ ಸಕ್ಲೈನ್ ಮುಷ್ತಾಕ್ 'ಬಿಗ್ ಬ್ರದರ್' ಅನಿಲ್ ಕುಂಬ್ಳೆ ಮಾಡಿದ ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ. ನನಗೆ ಸ್ವಲ್ಪ ಕಣ್ಣಿನ ಸಮಸ್ಯೆಯಿತ್ತು. ನಾವು ಇಂಗ್ಲೆಂಡ್‌ನಲ್ಲಿದ್ದೆವು. ಆಗ ನಾನು ನನ್ನ ಸಮಸ್ಯೆಯನ್ನು ಅನಿಲ್ ಕುಂಬ್ಳೆ ಅಣ್ಣನ ಬಳಿ ಹೇಳಿಕೊಂಡೆ. ಆಗ ಕುಂಬ್ಳೆ ಡಾಕ್ಟರ್ ಭರತ್ ರೂಗಾನಿಯನ್ನು ಭೇಟಿ ಮಾಡಲು ಹೇಳಿ, ಅವರ ಫೋನ್ ನಂಬರನ್ನು ನೀಡಿದರು. ಜೊತೆಗೆ ನಾನು ಹಾಗೂ ಸೌರವ್ ಗಂಗೂಲಿ ಇಬ್ಬರು ಆ ಡಾಕ್ಟರ್ ಸಲಹೆ ಪಡೆದಿರುವುದಾಗಿಯೂ ಕುಂಬ್ಳೆ ತಿಳಿಸಿದ್ದರು.

ಕುಂಬ್ಳೆ ಅವರ ಸಲಹೆಯಂತೆ ನಾನು ಲಂಡನ್‌ನಲ್ಲಿ ಡಾಕ್ಟರ್ ರೂಗಾನಿಯನ್ನು ಭೇಟಿಯಾದೆ. ನನ್ನನ್ನು ಪರೀಕ್ಷಿಸಿದ ಬಳಿಕ ಹೊಸ ಲೆನ್ಸ್ ನೀಡಿದರು. ಆ ಬಳಿಕ ನನ್ನ ಸಮಸ್ಯೆ ಬಗೆಹರಿಯಿತು. ಆ ಬಳಿಕ ಮೈದಾನದಲ್ಲಿ ಆತ್ಮವಿಶ್ವಾಸದಿಂದ ಫೀಲ್ಡಿಂಗ್ ಮಾಡಲು ಸಾಧ್ಯವಾಯಿತು. ಕುಂಬ್ಳೆ ಓರ್ವ ಅದ್ಭುತ ಮನುಷ್ಯ. ನಿಮ್ಮ ಸಹಾಯಕ್ಕೆ ಥ್ಯಾಂಕ್ಸ್ ಎಂದು ಕುಂಬ್ಳೆ ಸಹಾಯವನ್ನು ಸಕ್ಲೈನ್ ಮುಷ್ತಾಕ್ ಸ್ಮರಿಸಿಕೊಂಡಿದ್ದಾರೆ.
ಇನ್ನು ಬೌಲಿಂಗ್‌ನಲ್ಲೂ ಕುಂಬ್ಳೆ ನೀಡಿದ ಟಪ್ಸ್‌ನ್ನು ದೋಸ್ರಾ ಬೌಲಿಂಗ್ ಪಿತಾಮಹ ಮುಷ್ತಾಕ್ ನೆನಪಿಸಿಕೊಂಡಿದ್ದಾರೆ, ಇದರ ಜೊತೆಗೆ ಕುಂಬ್ಳೆಯನ್ನು ದೊಡ್ಡಣ್ಣ ಎಂದು ಬಾಯ್ತುಂಬ ಕರೆದಿದ್ದಾರೆ. ನಮ್ಮ ಸಂಸ್ಕೃತಿ ಹಿರಿಯಗೆ ಗೌರವಿಸುವುದನ್ನು ಹೇಳಿಕೊಟ್ಟಿದೆ. ಕುಂಬ್ಳೆ ನನಗೆ ದೊಡ್ಡಣನಿದ್ದಂತೆ. ನಾವು ಭೇಟಿಯಾದಗಲೆಲ್ಲಾ ಸಾಕಷ್ಟು ಸಮಯ ಮಾತನಾಡುತ್ತಿದ್ದೆವು. ನಾನು ಆಟವಾಡುವ ದಿನಗಳಲ್ಲೂ ನಾನು ಕುಂಬ್ಳೆ ಬಳಿ ಹೋಗಿ ಸಲಹೆಗಳನ್ನು ಪಡೆಯುತ್ತಿದ್ದೆ. ಈ ವೇಳೆ ಕುಂಬ್ಳೆ ನನಗೆ ಉಪಯುಕ್ತ ಸಲಹೆ ನೀಡುತ್ತಿದ್ದರು. ಆದರೆ ಯಾವತ್ತೂ ನನ್ನನ್ನು ಹಾದಿ ತಪ್ಪಿಸಿಲ್ಲ. ನನಗೆ ಅವರ ಮೇಲೆ ಅಪಾರವಾದ ಗೌರವವಿದೆ ಎಂದು ಮುಷ್ತಾಕ್ ಹೇಳಿದ್ದಾರೆ.

ಪಾಕಿಸ್ತಾನದ ಆಟಗಾರರು ಟೀಂ ಇಂಡಿಯಾ ಕ್ರಿಕೆಟಿಗರಿಂದ ಸಲಹೆ ಪಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನದ ಮಾಜಿ ನಾಯಕ ಯೂನುಸ್ ಖಾನ್ ಭಾರತದ ಗೋಡೆ ರಾಹುಲ್ ದ್ರಾವಿಡ್ ಅವರಿಂದ ಸಲಹೆ ಪಡೆದಿದ್ದನ್ನು ಸ್ಮರಿಸಿಕೊಂಡಿದ್ದರು. 2004ರಲ್ಲಿ ಚಾಂಫಿಯನ್ಸ್ ಟ್ರೋಫಿ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ದ್ರಾವಿಡ್ ಬಳಿ ಹೋಗಿ ನಿಮ್ಮೊಂದಿಗೆ 5 ನಿಮಿಷ ಮಾತನಾಡಬೇಕು ಎಂದೆ. ನಾನು ಜೂನಿಯರ್ ಆಟಗಾರನಾಗಿದ್ದರೂ, ಅವರೇ ನನ್ನ ಬಳಿ ಬಂದು ನನ್ನ ಗೊಂದಲಗಳನ್ನು ಪರಿಹರಿಸಿದರು. ಇದಾದ ಬಳಿಕ ನನ್ನ ವೃತ್ತಿಬದುಕು ಬದಲಾಯಿತು ಎಂದು ಯೂನುಸ್ ಖಾನ್ 2018ರಲ್ಲಿ ಸ್ಮರಿಸಿಕೊಂಡಿದ್ದರು.
"
