ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪೈಪೋಟಿ ಕುರಿತು ಸಕ್ಲೈನ್ ಮುಷ್ತಾಕ್ ಪ್ರತಿಕ್ರಿಯಿಸಿದ್ದಾರೆ. ಭಾರತವು ಪಾಕಿಸ್ತಾನದೊಂದಿಗೆ 10 ಟೆಸ್ಟ್, 10 ಏಕದಿನ, 10 ಟಿ20 ಪಂದ್ಯಗಳನ್ನು ಆಡಲಿ ಎಂದು ಸವಾಲು ಹಾಕಿದ್ದಾರೆ. ರಾಜಕೀಯವನ್ನು ಬದಿಗಿಟ್ಟು ನೋಡಿದರೆ ಭಾರತ ಉತ್ತಮ ತಂಡವೆಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಬದಲಾವಣೆಗಳು ಫಲಿತಾಂಶ ನೀಡಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಹೀನಾಯ ಪ್ರದರ್ಶನದಿಂದ ಮುಷ್ತಾಕ್ ಸವಾಲು ಹಾಸ್ಯಾಸ್ಪದವಾಗಿದೆ.

ಕರಾಚಿ: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದರೆ ಥಟ್ಟನೇ ನೆನಪಾಗುವುದು ಭಾರತ ಹಾಗೂ ಪಾಕಿಸ್ತಾನ. ಈ ಎರಡು ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ತುದಿಗಾಲಿನಲ್ಲಿ ನಿಂತಿರುತ್ತದೆ. ಭದ್ರತೆ ಹಾಗೂ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಾ ಬಂದಿವೆ.

ಇನ್ನು ಇತ್ತೀಚೆಗಷ್ಟೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು ಹೀನಾಯವಾಗಿ ಸೋಲು ಅನುಭವಿಸಿತ್ತು. ಮೊದಲು ಉಭಯ ತಂಡಗಳು ಗೆಲುವುಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದ್ದವು. ಆದರೆ ಇತ್ತೀಚಿಗಿನ ಮುಖಾಮುಖಿಯಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸುತ್ತಾ ಬಂದಿದ್ದು, ಉಭಯ ತಂಡಗಳ ನಡುವಿನ ಪೈಪೋಟಿ ಈಗಂತೂ ಸತ್ತೇ ಹೋಗಿದೆ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಮಾತನ್ನು ಒಪ್ಪಿಕೊಳ್ಳಲು ಪಾಕಿಸ್ತಾನದ ದಿಗ್ಗಜ ಆಟಗಾರ ಸಕ್ಲೈನ್ ಮುಷ್ತಾಕ್ ತಯಾರಿಲ್ಲ. ಇದಷ್ಟೇ ಅಲ್ಲದೇ ಭಾರತ ತಂಡಕ್ಕೆ ಮುಷ್ತಾಕ್ ಓಪನ್ ಚಾಲೆಂಜ್ ಹಾಕಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಮಹತ್ವದ ಬದಲಾವಣೆ? ಇಲ್ಲಿದೆ ಸಂಭಾವ್ಯ ತಂಡ

ಪಾಕಿಸ್ತಾನದ ಖಾಸಗಿ ಚಾನೆಲ್‌ವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ತಂಡವು ಪಾಕಿಸ್ತಾನ ಎದುರು 10 ಟೆಸ್ಟ್, 10 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಲಿ. ಆಗ ನಿಜವಾಗಿಯೂ ಯಾರು ಬಲಾಢ್ಯ ತಂಡ ಎನ್ನುವುದು ತಿಳಿಯಲಿದೆ ಎಂದು ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

'ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಹೇಳುವುದಾದರೇ, ಅವರ ತಂಡದ ಆಟಗಾರರು ಚೆನ್ನಾಗಿಯೇ ಇದ್ದಾರೆ. ಅವರು ಒಳ್ಳೆಯ ಕ್ರಿಕೆಟ್ ಆಡುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು' ಎಂದು ಭಾರತ ತಂಡದ ಆಟಗಾರರ ಗುಣಗಾನ ಮಾಡಿದ್ದಾರೆ. ಇನ್ನು ಮುಂದುವರೆದು, 'ನಿಮ್ಮದು ನಿಜಕ್ಕೂ ಒಳ್ಳೆಯ ತಂಡವಾಗಿದ್ದರೇ, ನನ್ನ ಪ್ರಕಾರ ನೀವು ಪಾಕಿಸ್ತಾನ ಎದುರು 10 ಟೆಸ್ಟ್, 10 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿ. ಆಗ ಎಲ್ಲವೂ ಸ್ಪಷ್ಟವಾಗುತ್ತದೆ' ಎಂದು ಮುಷ್ತಾಕ್ ಓಪನ್ ಚಾಲೆಂಜ್ ಹಾಕಿದ್ದಾರೆ. 

ಇನ್ನು ಪಾಕಿಸ್ತಾನದ ವಿಚಾರಕ್ಕೆ ಬಂದರೆ ಯಾವುದೂ ಸರಿಯಾಗಿ ಇದ್ದಂತೆ ಕಾಣುತ್ತಿಲ್ಲ. ಪಾಕ್ ತಂಡದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅದು ನಾಯಕತ್ವದಿಂದ ಹಿಡಿದು ಆಯ್ಕೆ ಸಮಿತಿ, ಟೀಂ ಮ್ಯಾನೇಜ್‌ಮೆಂಟ್, ಸಹಾಯಕ ಸಿಬ್ಬಂದಿ ಹೀಗೆ ಎಲ್ಲವನ್ನು ಬದಲಾಯಿಸಿದರೂ ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಸೆಮೀಸ್ ಮುನ್ನ ಭಾರತಕ್ಕೆ ಕಿವೀಸ್ ಟೆಸ್ಟ್

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹಟಕ್ಕೆ ಬಿದ್ದಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆತಿಥ್ಯವನ್ನು ವಹಿಸಿತ್ತು. ಸೆಮೀಸ್‌ ಪ್ರವೇಶಿಸಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಇನ್ನು ಭಾರತ ಎದುರಿನ ಮಾಡು ಇಲ್ಲವೇ ಮಡಿ ಎನಿಸಿಕೊಂಡಿದ್ದ ಪಂದ್ಯದಲ್ಲೂ ಹೀನಾಯ ಸೋಲು ಅನುಭವಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೇ ಹೊರಗುಳಿಯಿತು. ಇನ್ನು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಡಬೇಕಿತ್ತು. ಆದರೆ ಮಳೆಯಿಂದಾಗಿ ಆ ಪಂದ್ಯವು ರದ್ದಾಗಿದ್ದರಿಂದ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡವು. 'ಎ' ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದ ಪಾಕಿಸ್ತಾನ ತಂಡವು ಒಂದೂ ಗೆಲುವು ಕಾಣದೇ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿತು. ಈಗ ಇದೆಲ್ಲದರ ನಡುವೆ ಪಾಕಿಸ್ತಾನದ ದಿಗ್ಗಜ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಅವರ ಈ ಓಪನ್ ಚಾಲೆಂಜ್ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿ ಹಾಸ್ಯಾಸ್ಪದ ಎನಿಸಿದೆ.