* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ಆಬಿದ್ ಅಲಿ* ಆಬಿದ್ ಅಲಿ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್‌* ಕಳೆದ ವರ್ಷ ಕ್ರಿಕೆಟ್ ಆಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದ ಆಬಿದ್ ಅಲಿ

ಕರಾಚಿ(ಏ.24): ಪಂದ್ಯದ ವೇಳೆಯೇ ಹೃದಯಾಘಾತಕ್ಕೊಳಗಾಗಿ (Heart Attack) ಆಸ್ಪತ್ರೆಗೆ ಸೇರಿದ್ದ ಪಾಕಿಸ್ತಾನದ ಬ್ಯಾಟರ್‌ ಆಬಿದ್‌ ಅಲಿ (Abid Ali) ಇದೀಗ 4 ತಿಂಗಳುಗಳ ಬಳಿಕ ಮತ್ತೆ ಕ್ರಿಕೆಟ್‌ ಆಡಲು ಸಿದ್ಧವಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಖ್ವೈಡ್‌-ಎ-ಅಜಂ ಟ್ರೋಫಿಯಲ್ಲಿ ಸೆಂಟ್ರಲ್‌ ಪಂಜಾಬ್‌ ಪರ ಬ್ಯಾಟಿಂಗ್‌ ನಡೆಸುತ್ತಿದ್ದ 34 ವರ್ಷದ ಆಬಿದ್‌ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಮತ್ತೆ ಕ್ರಿಕೆಟ್‌ ಆಡಲು ಸಂತಸವಾಗುತ್ತಿದೆ. ವೈದ್ಯರು ಈಗ ಆಡಲು ಅನುಮತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ಇನ್ನು ಕ್ರಿಕೆಟ್‌ ಆಡಲ್ಲ ಎಂದೇ ಭಾವಿಸಿದ್ದೆ’ ಎಂದು ಆಬಿದ್‌ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಪರ ಕಣಕ್ಕಳಿಯಲು ಉತ್ಸುಕನಾಗಿದ್ದೇನೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ಸಂಪೂರ್ಣ ಫಿಟ್ ಆಗಿದ್ದೇನೆ. ನಾನೀಗ ಸಹಜ ಸ್ಥಿತಿಗೆ ಬಂದಿದ್ದೇನೆ ಎಂದು ಆಬಿದ್ ಅಲಿ ಹೇಳಿದ್ದಾರೆ.

ಆಬಿದ್ ಅಲಿ ಬರೋಬ್ಬರಿ ಎರಡು ವರ್ಷಗಳ ಹಿಂದೆ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವನ್ನಾಡಿದ್ದರು. ಬಾಂಗ್ಲಾದೇಶ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊನೆಯ ಬಾರಿಗೆ ಆಬಿದ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದರು. ಬಾಂಗ್ಲಾದೇಶ ಎದುರು ಆಬಿದ್ ಅಲಿ 2 ಟೆಸ್ಟ್ ಪಂದ್ಯಗಳನ್ನಾಡಿ 87.66ರ ಬ್ಯಾಟಿಂಗ್ ಸರಾಸರಿಯಲ್ಲಿ 263 ರನ್ ಸಿಡಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 2019ರಲ್ಲಿ ಶ್ರೀಲಂಕಾ ವಿರುದ್ದ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆಬಿದ್ ಅಲಿ, ಪಾಕಿಸ್ತಾನ ತಂಡದ ಪರ 16 ಟೆಸ್ಟ್ ಪಂದ್ಯಗಳನ್ನಾಡಿ 49.16ರ ಬ್ಯಾಟಿಂಗ್ ಸರಾಸರಿಯಲ್ಲಿ 1,180 ರನ್ ಬಾರಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ ಮೂರು ಅರ್ಧಶತಕಗಳು ಸೇರಿವೆ.

ಇಂಗ್ಲೆಂಡ್‌ ಕೌಂಟಿ: ಪೂಜಾರ ಶತಕ

ವರ್ಸೆಸ್ಟರ್‌(ಇಂಗ್ಲೆಂಡ್‌): ಭಾರತದ ಹಿರಿಯ ಬ್ಯಾಟರ್‌ ಚೇತೇಶ್ವರ್‌ ಪೂಜಾರ ಇಂಗ್ಲೆಂಡ್‌ ಕೌಂಟಿ ತಂಡ ಸಸೆಕ್ಸ್‌ ಪರ ಸತತ 2ನೇ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಶನಿವಾರ ವರ್ಸೆಸ್ಟರ್ ವಿರುದ್ಧದ ಪಂದ್ಯದಲ್ಲಿ ಪೂಜಾರ 206 ಎಸೆತಗಳಲ್ಲಿ 109 ರನ್‌ ಗಳಿಸಿ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 52ನೇ ಶತಕ ಪೂರ್ತಿಗೊಳಿಸಿದರು. ಆದರೆ ತಂಡ 269 ರನ್‌ಗೆ ಆಲೌಟಾಗಿದ್ದು, ಫಾಲೋ-ಆನ್‌ಗೆ ಒಳಗಾಗಿದೆ.

IPL 2022: ಮುಂಬೈ ಪರ ಮಿಂಚಿದ ಹೃತಿಕ್ ಶೋಕೀನ್ ಯಾರು ಗೊತ್ತಾ..?

ಕಳೆದ ವಾರ ಸಸೆಕ್ಸ್‌ ಪರ ಪಾದಾರ್ಪಣೆ ಮಾಡಿದ್ದ ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್‌ ಗಳಿಸಿದ್ದರೂ, 2ನೇ ಇನ್ನಿಂಗ್ಸ್‌ನಲ್ಲಿ ಔಟಾಗದೆ 201 ರನ್‌ ಸಿಡಿಸಿದ್ದರು. ದಕ್ಷಿಣ ಆಫ್ರಿಕಾ ಸರಣಿ ಬಳಿಕ ಪೂಜಾರ ಟೀಂ ಇಂಡಿಯಾದಿಂದ ಹೊರಬಿದ್ದಿದ್ದು, ಈಗ ಮತ್ತೊಮ್ಮೆ ತಂಡಕ್ಕೆ ಆಯ್ಕೆಯಾಗಲು ಎದುರು ನೋಡುತ್ತಿದ್ದಾರೆ.

ಮಹಿಳಾ ಟಿ20: ರಾಜ್ಯ ತಂಡಕ್ಕೆ ಮೊದಲ ಜಯ

ರಾಜ್‌ಕೋಟ್‌: ರಾಷ್ಟ್ರೀಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಮೊದಲ ಗೆಲುವು ದಾಖಲಿಸಿದೆ. ಈಗಾಗಲೇ ಹ್ಯಾಟ್ರಿಕ್‌ ಸೋತು ನಾಕೌಟ್‌ ರೇಸ್‌ನಿಂದ ಹೊರಬಿದ್ದಿದ್ದ ರಾಜ್ಯ ತಂಡ ಶುಕ್ರವಾರ ಮಧ್ಯಪ್ರದೇಶ ವಿರುದ್ಧ 5 ವಿಕೆಟ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಮಧ್ಯ ಪ್ರದೇಶ 5 ವಿಕೆಟ್‌ ಕಳೆದುಕೊಂಡು 136 ರನ್‌ ಕಲೆ ಹಾಕಿತು. ಪೂಜಾ ವಸ್ತ್ರಾಕರ್‌ 49 ರನ್‌ ಸಿಡಿಸಿದರು. ಚಂದು 2 ವಿಕೆಟ್‌ ಪಡೆದರು. ಸಾಧಾರಣ ಗುರಿ ಬೆನ್ನತ್ತಿದ ರಾಜ್ಯ ತಂಡ 19.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ದಿವ್ಯಾ 41, ವೃಂದಾ 39 ರನ್‌ ಬಾರಿಸಿದರೆ, ನಾಯಕಿ ವೇದಾ ಕೃಷ್ಣಮೂರ್ತಿ 19 ಎಸೆತಗಳಲ್ಲಿ 29 ರನ್‌ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ರಾಜ್ಯ ತಂಡ ಕೊನೆ ಪಂದ್ಯದಲ್ಲಿ ಭಾನುವಾರ ಡೆಲ್ಲಿ ವಿರುದ್ಧ ಆಡಲಿದೆ.