ದುಬೈ(ಏ.14): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಪಾಕಿಸ್ತಾನ ನಾಯಕ ಬಾಬರ್ ಅಜಂ ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. 

ಈ ಕುರಿತಂತೆ ಟ್ವೀಟ್‌ ಮಾಡಿರುವ ಐಸಿಸಿ, ನೂತನವಾಗಿ ಬಿಡುಗಡೆಯಾದ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ, ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ ಎಂದು ಟ್ವೀಟ್‌ ಮಾಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 1,258 ದಿನಗಳ ಕಾಲ ಏಕದಿನ ರ‍್ಯಾಂಕಿಂಗ್‌ನಲ್ಲಿ  ನಂ.1 ಸ್ಥಾನ ಕಾಯ್ದುಕೊಂಡಿದ್ದರು. ಇದೀಗ ಪಾಕ್‌ ನಾಯಕ ಬಾಬರ್ ಅಜಂ 865 ರೇಟಿಂಗ್‌ ಅಂಕಗಳನ್ನು ಪಡೆಯುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ವಿರಾಟ್ ಕೊಹ್ಲಿ 857 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕ್‌ ನಾಯಕ ಬಾಬರ್ ಅಜಂ 78ರ ಸರಾಸರಿಯಲ್ಲಿ 228 ರನ್‌ ಬಾರಿಸುವ ಮೂಲಕ ಅಮೋಘ ಪ್ರದರ್ಶನ ತೋರಿದ್ದರು. ಇದು ಬಾಬರ್ ಅಜಂ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲು ನೆರವಾಗಿದೆ. ಇದರ ಜತೆಗೆ ಐಸಿಸಿ ಏಕದಿನ ಕ್ರಿಕೆಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ 4ನೇ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಎನ್ನುವ ಕೀರ್ತಿಗೆ ಬಾಬರ್ ಅಜಂ ಪಾತ್ರರಾಗಿದ್ದಾರೆ. ಈ ಮೊದಲು ಜಹೀರ್ ಅಬ್ಬಾಸ್‌, ಜಾವೇದ್‌ ಮಿಯಾಂದಾದ್‌ ಹಾಗೂ ಮೊಹಮ್ಮದ್ ಯೂಸುಫ್‌ ಏಕದಿನ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಸಾಧನೆ ಮಾಡಿದ್ದರು.

ICC T20 ರ‍್ಯಾಂಕ್ ಪ್ರಕಟ; ಟಾಪ್ 10 ಪಟ್ಟಿಯಲ್ಲಿ ಕೊಹ್ಲಿ, ರಾಹುಲ್ ಮಾತ್ರ!

ಬ್ಯಾಟಿಂಗ್‌ ವಿಭಾಗದಲ್ಲಿ ಬಾಬರ್‌ ಅಜಂ, ವಿರಾಟ್‌ ಕೊಹ್ಲಿ ಮೊದಲೆರಡು ಸ್ಥಾನದಲ್ಲಿದ್ದರೆ, ರೋಹಿತ್‌ ಶರ್ಮಾ, ರಾಸ್‌ ಟೇಲರ್‌ ಹಾಗೂ ಆರೋನ್ ಫಿಂಚ್‌ ಟಾಪ್‌ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.