ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾ ವಜಾ ಮಾಡಲಾಗಿದೆ. ಈ ಸ್ಥಾನಕ್ಕೆ ನಜೀಮ್ ಸೇಥಿ ನೇಮಕ ಮಾಡಲಾಗಿದೆ 

ಇಸ್ಲಾಮಾಬಾದ್(ಡಿ.21): ತವರು ನೆಲದಲ್ಲಿನ ಟೆಸ್ಟ್ ಸರಣಿ ಸೋಲು ಪಾಕಿಸ್ತಾನ ಅಭಿಮಾನಿಗಳನ್ನು ಮಾತ್ರವಲ್ಲ ಪಾಕ್ ಕ್ರಿಕೆಟ್ ಮಂಡಳಿಯ ನಿದ್ದೆಗೆಡಿಸಿದೆ. ಇಂಗ್ಲೆಂಡ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದ ಪಾಕಿಸ್ತಾನ 0-3 ಅಂತರದಿಂದ ಸರಣಿ ಸೋತಿತ್ತು. ಈ ಸೋಲಿಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾರನ್ನು ವಜಾ ಮಾಡಲಾಗಿದೆ. 2021ರ ಸೆಪ್ಟೆಂಬರ್ ತಿಂಗಳಲ್ಲಿ ರಮೀಜ್ ರಾಜಾ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇದೀಗ ರಮೀಜ್ ರಾಜಾ ಸ್ಥಾನಕ್ಕೆ ಪತ್ರಕರ್ತ, ಪಾಕಿಸ್ತಾನ ಕ್ರಿಕೆಟ್ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ನಜೀಮ್ ಸೇಥಿಯನ್ನು ನೇಮಕ ಮಾಡಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಮಿತಿಯ ಪ್ರಮುಖ ಸದಸ್ಯ ಪ್ರಧಾನಿ ಶಹಬಾಜ್ ಶರೀಫ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ನಜೀಮ್ ಸೇಥಿಯನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಿ ಹಾಕಲಾಗಿದೆ. ನಜೀಮ್ ಸೇಥಿ ಈ ಹಿಂದೆ ಪಾಕಿಸ್ತಾನ ಕ್ರಿಕಟ್ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಆಯ್ಕೆಯಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನಗಿಂದ ಕೆಳಗಿಳಿದಿದ್ದರು. 

2023ರ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ರಮೀಜ್ ರಾಜಾ

ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡ ಸತತ ಸೋಲು ಕಾಣುತ್ತಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಮುಖ್ಯಸ್ಥ ಸ್ಥಾನದಿಂದ ರಮೀಜ್‌ ರಾಜಾ ವಿರುದ್ದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಮಂಡಳಿಯ ಸದಸ್ಯರು ರಮೀಜ್‌ ಕಾರ‍್ಯನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಕಾನೂನು ಸಚಿವಾಲಯ ಪಿಸಿಬಿ ಮುಖ್ಯಸ್ಥರನ್ನು ಬದಲಾಯಿಸುವಂತೆ ಪ್ರಧಾನ ಮಂತ್ರಿಗೆ ಪತ್ರ ಬರೆದಿತ್ತು. 2021ರ ಸೆಪ್ಟಂಬರ್‌ನಲ್ಲಿ ಅಂದಿನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ರಮೀಜ್‌ರನ್ನು ಮುಖ್ಯಸ್ಥರನ್ನಾಗಿ ನೇಮಿಸಿದ್ದರು.

2015ರಲ್ಲಿ ನಜೀಮ್ ಸೇಥಿ ಮೊದಲ ಬಾರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿದ್ದರು. ಅಂದಿನ ಪ್ರಧಾನಿ ನವಾಜ್ ಷರೀಫ್ ಸೇಥಿ ಹೆಸರನ್ನು ಅಂತಿಮಗೊಳಿಸಿ ಹಂಗಾಮಿ ಅಧ್ಯಕ್ಷರಾಗಿ ನೇಮಕಾತಿಗೆ ಆದೇಶ ನೀಡಿದ್ದರು. ಇಸ್ಲಾಮಾಬಾದ್ ಕೋರ್ಟ್ ಆದೇಶದಂತೆ ಹಂಗಾಮಿ ಅಧ್ಯಕ್ಷರ ಆಯ್ಕೆ ಮಾಡಲಾಗಿತ್ತು. ನವಾಜ್ ಷರೀಫ್ ಆಪ್ತರಾಗಿರುವ ನಜೀಮ್ ಸೇಥಿಯನ್ನು ಇದೀಗ ಪ್ರಧಾನಿ ಶಹಬಾಜ್ ಷರೀಪ್ ಮತ್ತೆ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. 

'ಭಾರತೀಯರು ಖುಷಿ ಆಗಿರಬಹುದು' ಪಾಕ್‌ ಸೋಲಿನ ಬಳಿಕ ಪಿಸಿಬಿ ಚೇರ್ಮನ್‌ ರಮೀಜ್‌ ರಾಜಾ ಕಿಡಿ!

ರಮೀಜ್ ರಾಜಾ ಅಧ್ಯಕ್ಷರಾದ ಬಳಿಕ ಭಾರತ ಜೊತೆಗಿನ ಸಂಬಂಧ ಮತ್ತಷ್ಟು ಹದಗೆಟ್ಟಿತು. ಆಕ್ರೋಶದ ನುಡಿ, ವಿವಾದಿತ ಹೇಳಿಕೆಗಳ ಮೂಲಕ ಬಿಸಿಸಿಐ ಕೆಣಕುವ ಪ್ರಯತ್ನ ಮಾಡಿದ್ದರು. ಭಾರತ ತಂಡ ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್‌ ಆಡಲಿದೆ’ ಅನ್ನೋ ಬಿಸಿಸಿಐ ಮಾತಿಗೆ ಪ್ರತಿಕ್ರಿಯಿಸಿದ್ದ ಪಿಸಿಬಿ ಅಧ್ಯಕ್ಷ ರಮೀಜ್‌ ರಾಜಾ, ‘ಇಂತಹ ಹೇಳಿಕೆ ಏಷ್ಯಾ ಹಾಗೂ ಐಸಿಸಿ ಕ್ರಿಕೆಟ್‌ ಸಮುದಾಯಗಳನ್ನು ಇಬ್ಭಾಗ ಮಾಡುತ್ತದೆ ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ಭಾರತಕ್ಕೆ ತೆರಳುವುದರ ಮೇಲೂ ಪರಿಣಾಮ ಬೀರಲಿದೆ. ಶಾ ಹೇಳಿಕೆ ಬಗ್ಗೆ ಇದುವರೆಗೆ ಎಸಿಸಿ ಕಡೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ನಮಗೆ ಬಂದಿಲ್ಲ. ಹೀಗಾಗಿ ಇಂತಹ ಸೂಕ್ಷ್ಮ ವಿಚಾರದ ಚರ್ಚೆಗೆ ತುರ್ತು ಸಭೆ ಅಗತ್ಯವಿದೆ’ ಎಂದು ಹೇಳಿದ್ದರು.

 ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ ಬೆನ್ನಲ್ಲೇ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಗೆ ಬಹಿಷ್ಕಾರ ಹಾಕುವ ಬೆದರಿಕೆಯನ್ನು ರಮೀಜ್ ರಾಜಾ ಒಡ್ಡಿದ್ದರು