* ಇಂಗ್ಲೆಂಡ್ ಎದುರು ಮತ್ತೊಮ್ಮೆ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ* ವಿರಾಟ್ ಕೊಹ್ಲಿ ಬೆನ್ನಿಗೆ ನಿಂತ ಪಾಕ್ ನಾಯಕ ಬಾಬರ್ ಅಜಂ* ಸದೃಢವಾಗಿರಿ, ಇದೆಲ್ಲರ ಕಳೆದು ಹೋಗುತ್ತದೆ ಎಂದ ಪಾಕ್ ಕ್ರಿಕೆಟಿಗ
ಇಸ್ಲಾಮಾಬಾದ್(ಜು.15): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ಹಾಲಿ ನಾಯಕ ಬಾಬರ್ ಅಜಂ ಈ ಇಬ್ಬರು ಆಟಗಾರರು ಆಧುನಿಕ ಕ್ರಿಕೆಟ್ ಸೂಪರ್ ಸ್ಟಾರ್ ಬ್ಯಾಟರ್‌ಗಳು ಎನಿಸಿಕೊಂಡಿದ್ದಾರೆ. ಈ ಇಬ್ಬರು ಆಟಗಾರರ ನಡುವೆ ಮೈದಾನದಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟ್ಟಿರುವುದನ್ನು ಕ್ರಿಕೆಟ್ ಅಭಿಮಾನಿಗಳು ನೋಡಿದ್ದಾರೆ. ಆದರೆ ಸದ್ಯ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ಕಳೆದೆರಡು ಮೂರು ವರ್ಷಗಳಿಂದ ದೊಡ್ಡ ಮೊತ್ತ ಕಲೆಹಾಕಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಇದೀಗ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ವಿರಾಟ್ ಕೊಹ್ಲಿಗೆ ನೆರೆಯ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸ್ಪೂರ್ತಿಯ ಮಾತುಗಳ ಮೂಲಕ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಗಾಗ ವಿರಾಟ್ ಕೊಹ್ಲಿಯ ಜತೆಗೆ ಬಾಬರ್ ಅಜಂ ಅವರನ್ನು ಹೋಲಿಸಲಾಗುತ್ತದೆ. ಸದ್ಯ ಬಾಬರ್ ಅಜಂ ಐಸಿಸಿ ಏಕದಿನ ಹಾಗೂ ಟಿ20 ಬ್ಯಾಟಿಂಗ್ ವಿಭಾಗದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಕಟ್ಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊಹ್ಲಿ 25 ಎಸೆತಗಳಲ್ಲಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಅಜಂ, ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಜತೆಯಾಗಿ ಇರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಂಕಷ್ಟದ ಕಾಲ ಕಳೆದು ಹೋಗುತ್ತದೆ ಧೈರ್ಯವಾಗಿರಿ ಎಂದು ಸಲಹೆ ನೀಡಿದ್ದಾರೆ.
ಸದೃಢವಾಗಿರಿ, ಇದು ಕೂಡಾ ಕಳೆದುಹೋಗುತ್ತದೆ ಎಂದು ಬಾಬರ್ ಅಜಂ ಟ್ವೀಟ್ ಮಾಡಿ ಧೈರ್ಯ ತುಂಬಿದ್ದಾರೆ. ಬಾಬರ್ ಅಜಂ, ಇತ್ತೀಚಿಗಿನ ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಬರೀ ಪಾಕಿಸ್ತಾನ ಮಾತ್ರವಲ್ಲದೇ ವಿದೇಶಿ ನೆಲದಲ್ಲೂ ಬಾಬರ್ ಅಜಂ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಸೂಪರ್ ಸ್ಟಾರ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿರುವ ಬಾಬರ್ ಅಜಂ ಅವರನ್ನು ಹಲವು ಮಾಜಿ ಕ್ರಿಕೆಟಿಗರು ಅಜಂ ವಿಶ್ವದ ದಿಗ್ಗಜ ಕ್ರಿಕೆಟಿಗ ಎಂದು ಬಣ್ಣಿಸಿದ್ದಾರೆ. ಸದ್ಯ ಆಧುನಿಕ ಕ್ರಿಕೆಟ್‌ನಲ್ಲಿ ಫ್ಯಾಬ್ 4 ಆಟಗಾರರಾಗಿ ವಿರಾಟ್ ಕೊಹ್ಲಿ, ಜೋ ರೂಟ್, ಕೇನ್ ವಿಲಿಯಮ್ಸನ್ ಹಾಗೂ ಸ್ಟೀವ್ ಸ್ಮಿತ್ ಅವರನ್ನು ಗುರುತಿಸಲಾಗುತ್ತಿದೆ. ಇದೀಗ ಟಾಪ್ 5 ಆಟಗಾರರಾಗಿ ಬಾಬರ್ ಅಜಂ ಅವರನ್ನು ಸೇರಿಸಬೇಕು ಎನ್ನುವ ಚರ್ಚೆಯೂ ಜೋರಾಗಿದೆ.
ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ರೋಹಿತ್ ಶರ್ಮಾ ಯಾಕೆ ದೀರ್ಘ ಚರ್ಚೆ ನಡೆಸುತ್ತಿಲ್ಲ..?
ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ದೃಷ್ಠಿಯಿಂದ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುವುದು ಭಾರತ ಕ್ರಿಕೆಟ್ ತಂಡದ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಇಂಗ್ಲೆಂಡ್ ಎದುರಿನ ಸರಣಿ ಮುಕ್ತಾಯವಾಗುತ್ತಿದ್ದಂತೆಯೆ ಭಾರತ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ವೆಸ್ಟ್ ಇಂಡೀಸ್ ಎದುರು ಭಾರತ ತಂಡವು 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಈ ಸರಣಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯ ಮುಕ್ತಾಯದ ಬಳಿಕ ಮಾದ್ಯಮದವರು ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೊಹ್ಲಿಯವರಂತಹ ಆಟಗಾರರು ಫಾರ್ಮ್‌ಗೆ ಮರಳಲು ಒಂದೆರಡು ಪಂದ್ಯಗಳು ಸಾಕು. ಅವರು ಆದಷ್ಟು ಬೇಗ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
