* ಐಸಿಸಿ ನೂತನ ಟಿ20 ರ‍್ಯಾಂಕಿಂಗ್‌ ಪ್ರಕಟವಾಗಿದ್ದು ಬಾಬರ್ ಅಜಂ ಅಗ್ರಸ್ಥಾನ ಭದ್ರ* ಟಿ20 ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದ ಬಾಬರ್ ಅಜಂ* ಟಿ20 ಶ್ರೇಯಾಂಕದಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದ ಏಕೈಕ ಭಾರತೀಯ ಕಿಶನ್

ದುಬೈ(ಜೂ.29): ಇತ್ತೀಚೆಗಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ (Babar Azam), ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಈಗಾಗಲೇ ಹಲವು ದಿಗ್ಗಜ ಕ್ರಿಕೆಟಿಗರು ಬಾಬರ್ ಅಜಂ ಅವರನ್ನು ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್ ಎಂದು ಬಣ್ಣಿಸಿದ್ದಾರೆ. ಮತ್ತೆ ಕೆಲವರು ಆಧುನಿಕ ಕ್ರಿಕೆಟ್‌ನ ಫ್ಯಾಬ್ 4 ಆಟಗಾರರಾದ ವಿರಾಟ್ ಕೊಹ್ಲಿ, ಜೋ ರೂಟ್ (Joe Root), ಕೇನ್ ವಿಲಿಯಮ್ಸನ್ (Kane Williamson) ಹಾಗೂ ಸ್ಟೀವ್ ಸ್ಮಿತ್ (Steve Smith) ಸಾಲಿಗೆ ಬಾಬರ್ ಅಜಂ ಅವರನ್ನು ಸೇರಿಸಬೇಕು ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

ಬಾಬರ್ ಅಜಂ ಅವರನ್ನು ಯಾರಾದರೂ ಆಧುನಿಕ ಕ್ರಿಕೆಟ್‌ನ ಉತ್ತಮ ಬ್ಯಾಟರ್ ಎಂದು ಕರೆಯಲಿ ಅಥವಾ ಬಿಡಲಿ, ಬಾಬರ್ ಅಜಂ ಅಂತೂ ನಿರಂತರವಾಗಿ ರನ್‌ಗಳ ಗುಡ್ಡೆಹಾಕುತ್ತಲೇ ಸಾಗುತ್ತಿದ್ದಾರೆ. ಅದರಲ್ಲೂ ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಬಾಬರ್ ಅಜಂ ಅಸಾಧಾರಣ ಪ್ರದರ್ಶನ ತೋರುತ್ತಾ ಮುನ್ನುಗ್ಗುತ್ತಿದ್ದು, ಐಸಿಸಿ ರ‍್ಯಾಂಕಿಂಗ್‌ನಲ್ಲೂ (ICC Rankings) ಅಗ್ರಸ್ಥಾನದಲ್ಲೇ ಮುಂದುವರೆಯುತ್ತಿದ್ದಾರೆ. ಇದೀಗ ನೂತನವಾಗಿ ಬಿಡುಗಡೆಯಾದ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಮತ್ತೊಮ್ಮೆ ಬಾಬರ್ ಅಜಂ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಬಾಬರ್ ಅಜಂ ಯಶಸ್ವಿಯಾಗಿದ್ದಾರೆ.

ಹೌದು, ಇಷ್ಟು ದಿನಗಳ ಕಾಲ ಟಿ20 ರ‍್ಯಾಂಕಿಂಗ್‌ನಲ್ಲಿ ಅತಿಹೆಚ್ಚು ದಿನಗಳ ಕಾಲ ನಂ.1 ಸ್ಥಾನ ಕಾಯ್ದುಕೊಂಡ ದಾಖಲೆ ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿತ್ತು. ವಿರಾಟ್ ಕೊಹ್ಲಿ ಟಿ20 ರ‍್ಯಾಂಕಿಂಗ್‌ನಲ್ಲಿ ಬರೋಬ್ಬರಿ 1,013 ದಿನಗಳ ಕಾಲ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದರು. ಇದೀಗ ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಬಾಬರ್ ಅಜಂ ಯಸಸ್ವಿಯಾಗಿದ್ದಾರೆ.

ಉಮ್ರಾನ್ ಮಲಿಕ್‌ಗೆ ಕೊನೆಯ ಓವರ್‌ ನೀಡಲು ಕಾರಣವೇನು? ಮಾಸ್ಟರ್‌ ಪ್ಲಾನ್‌ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ, ಸದ್ಯ ಏಕದಿನ ಹಾಗೂ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈಗವರು ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿದ್ದಾರೆ ಎಂದು ಇತ್ತೀಚೆಗಷ್ಟೇ ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಇನ್ನು ಬಾಬರ್ ಅಜಂ ಅವರ ಸಹ ಆಟಗಾರ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್‌ ಮೊಹಮ್ಮದ್ ರಿಜ್ವಾನ್, ಟಿ20 ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ ಕಳೆದ ವರ್ಷ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದರು. 

Scroll to load tweet…

ಇನ್ನುಳಿದಂತೆ ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ (Mohammad Rizwan) ಬಳಿಕ, ದಕ್ಷಿಣ ಆಫ್ರಿಕಾದ ಏಯ್ಡನ್ ಮಾರ್ಕ್‌ರಮ್, ಇಂಗ್ಲೆಂಡ್‌ನ ಡೇವಿಡ್ ಮಲಾನ್‌ ಹಾಗೂ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆರೋನ್ ಫಿಂಚ್ (Aaron Finch) ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಇನ್ನು ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಬ್ಯಾಟರ್‌ ಇಶಾನ್ ಕಿಶಾನ್ (Ishan Kishan) ಒಂದು ಸ್ಥಾನ ಕುಸಿತ ಕಂಡು 7ನೇ ಸ್ಥಾನದಲ್ಲಿದ್ದಾರೆ. ಇದಷ್ಟೇ ಅಲ್ಲದೇ ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದ ಏಕೈಕ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೂ ಜಾರ್ಖಂಡ್ ಮೂಲದ ಇಶಾನ್ ಕಿಶನ್ ಪಾತ್ರರಾಗಿದ್ದಾರೆ.