IPL ಟೂರ್ನಿಗಿಂತ BBL ಟೂರ್ನಿ ಬೆಸ್ಟ್ ಎಂದ ಬಾಬರ್ ಅಜಂಗೆ ಖಡಕ್ ತಿರುಗೇಟು ಕೊಟ್ಟ ಹರ್ಭಜನ್ ಸಿಂಗ್..!
ಐಪಿಎಲ್‌ಗಿಂತ ಬಿಬಿಎಲ್ ಬೆಸ್ಟ್ ಎಂದ ಬಾಬರ್ ಅಜಂ
ಬಾಬರ್ ಅಜಂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ
ಬಾಬರ್ ಅಜಂ ಹೇಳಿಕೆಗೆ ಟಾಂಗ್ ಕೊಟ್ಟ ಹರ್ಭಜನ್ ಸಿಂಗ್
ನವದೆಹಲಿ(ಮಾ.17): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಜಗತ್ತಿನ ಅತ್ಯಂತ ದೊಡ್ಡ ಟಿ20 ಕ್ರಿಕೆಟ್ ಲೀಗ್ ಎನ್ನುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ. ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜಗತ್ತಿನ ನಾನಾ ದೇಶದ ಕ್ರಿಕೆಟಿಗರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಯಾಕೆಂದರೆ ಐಪಿಎಲ್‌ನ ಜನಪ್ರಿಯತೆ ಹಾಗೂ ಇದರಲ್ಲಿ ಸಿಗುವ ಹಣದ ಪ್ರಮಾಣ ಬೇರೆ ಯಾವುದೇ ಟೂರ್ನಿಯಲ್ಲಿ ಸಿಗುವುದಿಲ್ಲ.
ಸದ್ಯ ಜಗತ್ತಿನಾದ್ಯಂತ ಬಿಗ್‌ಬ್ಯಾಶ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್, SA20 ಲೀಗ್ ಹೀಗೆ ಹಲವು ಟೂರ್ನಿಗಳು ನಡೆಯುತ್ತಿದ್ದರೂ ಯಾವ ಟೂರ್ನಿಯು ಐಪಿಎಲ್ ಮಟ್ಟಕ್ಕೆ ಬೆಳೆದಿಲ್ಲ. ಆದರೆ ಅಚ್ಚರಿ ಎನ್ನುವಂತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಬಿಗ್‌ಬ್ಯಾಶ್ ಲೀಗ್ ಹಾಗೂ ಐಪಿಎಲ್ ನಡುವೆ ನೀವು ಇಷ್ಟ ಪಡುವ ಟೂರ್ನಿ ಯಾವುದು ಎನ್ನುವ ಪ್ರಶ್ನೆಗೆ, ಬಿಗ್‌ಬ್ಯಾಶ್ ಲೀಗ್ ಎಂದು ಉತ್ತರಿಸಿದ್ದಾರೆ. ಇದಕ್ಕೆ ಹರ್ಭಜನ್ ಸಿಂಗ್ ಖಡಕ್ ರಿಪ್ಲೇ ಮಾಡಿದ್ದಾರೆ.
ಪಾಕ್ ನಾಯಕ ಬಾಬರ್ ಅಜಂಗೆ ಐಪಿಎಲ್ ಅಥವಾ ಬಿಗ್‌ಬ್ಯಾಶ್ ಲೀಗ್ ಈ ಎರಡು ಟೂರ್ನಿಗಳ ಪೈಕಿ ನಿಮಗಿಷ್ಟವಾದದ್ದು ಯಾವುದು ಎಂದು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಬಾಬರ್ ಅಜಂ, "ಆಸ್ಟ್ರೇಲಿಯಾದಲ್ಲಿರುವ ವಾತಾವಾರಣ ಕೊಂಚ ವಿಭಿನ್ನವಾದದ್ದು. ಆಸ್ಟ್ರೇಲಿಯಾದಲ್ಲಿನ ಪಿಚ್‌ಗಳು ತುಂಬಾ ವೇಗಿಗಳಿಗೆ ನೆರವು ನೀಡುತ್ತವೆ. ಅಲ್ಲಿ ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಗಲಿದೆ. ಆದರೆ ಐಪಿಎಲ್ ಆಡುವ ಏಷ್ಯಾದ ಪಿಚ್‌ಗಳು ನಮ್ಮಂತೆ ಸಾಮಾನ್ಯವಾಗಿರಲಿದೆ ಎಂದು ಪಾಕ್ ನಾಯಕ ಹೇಳಿದ್ದಾರೆ.
ಇನ್ನು ಬಾಬರ್ ಅಜಂ ಅವರ ಹೇಳಿಗೆ ಹರ್ಭಜನ್ ಸಿಂಗ್ ಜೋರಾಗಿ ನಗುವ ಸ್ಮೈಲ್ ಎಮೋಜಿ ಬಳಸಿ ಟಾಂಗ್ ನೀಡಿದ್ದಾರೆ.
ಬಾಬರ್ ಅಜಂ ಸದ್ಯ, ಎಂಟನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಆಡುವಲ್ಲಿ ಬ್ಯುಸಿಯಾಗಿದ್ದಾರೆ. ಬಾಬರ್ ಅಜಂ ನೇತೃತ್ವದ ಪೇಶಾವರ್ ಝಲ್ಮಿ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಕ್ವಾಲಿಫೈಯರ್ ಹಂತಕ್ಕೆ ಲಗ್ಗೆಯಿಟಿದೆ. ಪೇಶಾವರ್ ಝಲ್ಮಿ ಪರ ನಾಯಕನ ಆಟವಾಡಿದ ಬಾಬರ್ ಅಜಂ, ಕೇವಲ 39 ಎಸೆತಗಳಲ್ಲಿ 64 ರನ್ ಸಿಡಿಸಿದ್ದರು. ಈ ಮೂಲಕ ಪೇಶಾವರ್ ತಂಡವು 183 ರನ್ ಕಲೆಹಾಕಿತು. ಇನ್ನು ಈ ಸವಾಲಿನ ಗುರಿ ಬೆನ್ನತ್ತಿದ ಇಸ್ಲಾಮಾಬಾದ್ ಯುನೈಟೆಡ್ ತಂಡವು 171 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ಇಸ್ಲಾಮಾಬಾದ್ ತಂಡವು ಫೈನಲ್ ರೇಸ್‌ನಿಂದ ಹೊರಬಿದ್ದಿತ್ತು. ಇದೀಗ ಪೇಶಾವರ್ ಝಲ್ಮಿ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡವನ್ನು ಎದುರಿಸಲಿದೆ.
ವಯಸ್ಸು 41 ಆದರೂ ಧೋನಿ ತೋಳ್ಬಲಕ್ಕೆ ಸಾಟಿಯಿಲ್ಲ..! ನೆಟ್ಸ್‌ನಲ್ಲಿ ಮಹಿ ಭರ್ಜರಿ ಪ್ರಾಕ್ಟೀಸ್
ಇನ್ನು ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಗಳು ತವರು ಹಾಗೂ ತವರಿನಾಚೆ ಮಾದರಿಯಲ್ಲಿ ನಡೆಯಲಿವೆ. ಈ ಬಾರಿ ಕೂಡಾ, ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್ ಸೇರಿದಂತೆ 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.