ಮುಂಬರುವ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟಿದ್ದನ್ನು ವಿರೋಧಿಸಿ, ಪಾಕಿಸ್ತಾನವು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಪಾಕಿಸ್ತಾನದ ಈ ನಿರ್ಧಾರವನ್ನು ಬಾಂಗ್ಲಾದೇಶ ಸ್ವಾಗತಿಸಿದ್ದು, ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.

ಢಾಕಾ: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಾಯ್ಕಾಟ್ ಮಾಡಲು ಪಾಕಿಸ್ತಾನ ನಿರ್ಧರಿಸಿದೆ. ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟಿದ್ದನ್ನು ಮತ್ತು ಪಂದ್ಯದ ಸ್ಥಳವನ್ನು ಬದಲಾಯಿಸದಿದ್ದನ್ನು ವಿರೋಧಿಸಿ ಪಾಕ್ ಈ ನಿರ್ಧಾರ ಕೈಗೊಂಡಿದೆ. ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ-ಪಾಕ್ ಪಂದ್ಯವನ್ನು ಆಡುವುದಿಲ್ಲ ಎಂದು ಪಾಕಿಸ್ತಾನ ಘೋಷಿಸಿದೆ. ಪಾಕಿಸ್ತಾನದ ಈ ನಡೆಯನ್ನು ಬಾಂಗ್ಲಾದೇಶ ಸ್ವಾಗತಿಸಿದ್ದು, ಕ್ರೀಡಾ ಸಲಹೆಗಾರ ಆಸಿಫ್ ನಸ್ರುಲ್ ಅವರು ಪಾಕಿಸ್ತಾನಕ್ಕೆ ಧನ್ಯವಾದ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಥ್ಯಾಂಕ್ಯೂ ಪಾಕಿಸ್ತಾನ್

ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಲ್ಲಿ ಕ್ರೀಡಾ ಸಚಿವರಿಗೆ ಸಮಾನವಾದ ಹುದ್ದೆಯಲ್ಲಿರುವ ಆಸಿಫ್ ನಸ್ರುಲ್, ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. 'ಥ್ಯಾಂಕ್ಯೂ ಪಾಕಿಸ್ತಾನ್. ಬಾಂಗ್ಲಾದೇಶವನ್ನು ವಿಶ್ವಕಪ್‌ನಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಭಾರತ ವಿರುದ್ಧದ ಮ್ಯಾಚ್ ಬಾಯ್ಕಾಟ್ ಮಾಡುವುದಾಗಿ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ. ಈ ನಿರ್ಧಾರಕ್ಕೆ ಬಾಂಗ್ಲಾದೇಶ ಋಣಿಯಾಗಿದೆ' ಎಂದು ನಸ್ರುಲ್ ಪೋಸ್ಟ್ ಮಾಡಿದ್ದಾರೆ.

ಮುಸ್ತಾಫಿಜುರ್‌ ರಹ್ಮಾನ್‌ರನ್ನು ಐಪಿಎಲ್‌ನಿಂದ ಹೊರಗಿಟ್ಟಿದ್ದಕ್ಕೆ ಬಾಂಗ್ಲಾ ತಂಡ ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ ಎಂದು ತಗಾದೆ ತೆಗೆಯಿತು. ಭಾರತದಲ್ಲಿ ಭದ್ರತೆ ಸಮಸ್ಯೆ ಇದೆ ಎಂದು ನೆಪ ಹೇಳಿತು. ಇದಕ್ಕೆ ಐಸಿಸಿ ಸೊಪ್ಪು ಹಾಕಲಿಲ್ಲ. ಟಿ20 ಲೀಗ್‌ನಿಂದ ಆಟಗಾರನನ್ನು ಹೊರಗಿಟ್ಟಿದ್ದಕ್ಕೆ ಟಿ20 ವಿಶ್ವಕಪ್‌ನಿಂದಲೇ ಹೊರನಡೆದ ಬಾಂಗ್ಲಾ, ತನ್ನ ಕ್ರಿಕೆಟ್‌ ಭವಿಷ್ಯಕ್ಕೇ ಕೊಳ್ಳಿ ಇಟ್ಟಿತು. ಬಾಂಗ್ಲಾದೇಶ ಭದ್ರತೆಯ ಕಾರಣ ನೀಡಿತಾದರೂ, ಬಾಂಗ್ಲಾಗೆ ಬೆಂಬಲವಾಗಿ ನಿಂತ ಪಾಕ್ ಯಾವುದೇ ಕಾರಣ ನೀಡದೆ ಭಾರತ ವಿರುದ್ಧ ಆಡಲ್ಲ ಎಂದು ಘೋಷಿಸಿದೆ

ಪಾಕಿಸ್ತಾನದ ನಿಲುವು ಮತ್ತು ಬೆಂಬಲ

ಕಳೆದ ವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಸರ್ಕಾರಿ ಸಭೆಯಲ್ಲಿ ಪಾಕ್ ಪ್ರಧಾನಿ ಈ ಬಗ್ಗೆ ಸ್ಪಷ್ಟಪಡಿಸಿದ್ದರು. 'ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು. ಬಾಂಗ್ಲಾದೇಶದ ಜೊತೆ ನಿಲ್ಲುವುದು ನಮ್ಮ ಕರ್ತವ್ಯ' ಎಂದು ಅವರು ಹೇಳಿದ್ದರು. ಭದ್ರತಾ ಕಾರಣಗಳನ್ನು ನೀಡಿ ಭಾರತದಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿತ್ತು. ಆಗ ಐಸಿಸಿ, ಬಾಂಗ್ಲಾ ಬದಲು ಸ್ಕಾಟ್ಲೆಂಡ್‌ ತಂಡವನ್ನು ಟೂರ್ನಿಗೆ ಸೇರಿಸಿಕೊಂಡಿತ್ತು. ಇದು ಪಾಕಿಸ್ತಾನದ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ, ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಲು ಭಾರತ ವಿರುದ್ಧದ ಮಹತ್ವದ ಪಂದ್ಯವನ್ನು ಆಡಬೇಡಿ ಎಂದು ಪಾಕ್ ಸರ್ಕಾರವು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ಗೆ (ಪಿಸಿಬಿ) ಸೂಚನೆ ನೀಡಿತ್ತು.

ಬದಲಾಗುತ್ತಿರುವ ರಾಜಕೀಯ ಚಿತ್ರಣ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನವಾದ ನಂತರ, ಪಾಕಿಸ್ತಾನದ ಜೊತೆ ದೇಶದ ಸಂಬಂಧ ಗಟ್ಟಿಯಾಗುತ್ತಿದೆ ಎನ್ನಲಾಗುತ್ತಿದೆ. 1971ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದಿದ್ದ ಬಾಂಗ್ಲಾದೇಶ, ಈಗ ಹಳೆಯ ವೈಷಮ್ಯ ಮರೆತು ಇಸ್ಲಾಮಾಬಾದ್ ಜೊತೆ ಹೊಸ ಬಾಂಧವ್ಯ ಶುರುಮಾಡುತ್ತಿದೆ. ಇದರ ಭಾಗವಾಗಿಯೇ, 14 ವರ್ಷಗಳ ನಂತರ ಕಳೆದ ವಾರವಷ್ಟೇ ಢಾಕಾ ಮತ್ತು ಇಸ್ಲಾಮಾಬಾದ್ ನಡುವೆ ನೇರ ವಿಮಾನಯಾನ ಸೇವೆ ಮತ್ತೆ ಆರಂಭವಾಗಿದೆ.

ಪಿಸಿಬಿ ಬದಲು ಸರ್ಕಾರ ಘೋಷಿಸಿದ್ದು ಯಾಕೆ?

ಭಾರತ ವಿರುದ್ಧ ಆಡಲ್ಲ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಬದಲು ಪಾಕ್‌ ಸರ್ಕಾರ ಘೋಷಿಸಿದೆ. ಇದು ರಾಜಕೀಯ ನಡೆಯಾಗಿ ಕಂಡುಬಂದರೂ ಇದರ ಹಿಂದೆ ಬೇರೆಯೇ ಕಾರಣವಿದೆ. 1996ರಲ್ಲಿ ಶ್ರೀಲಂಕಾದಲ್ಲಿ ಸ್ಫೋಟದ ಕಾರಣ ವಿಶ್ವಕಪ್‌ ಪಂದ್ಯ ಆಡಲು ಆಸೀಸ್‌, ವಿಂಡೀಸ್‌ ತಂಡಗಳು ಕೊಲಂಬೊಗೆ ತೆರಳಿರಲಿಲ್ಲ. 2003ರಲ್ಲಿ ಜಿಂಬಾಬ್ವೆಯಲ್ಲಿ ಆಡಲು ಇಂಗ್ಲೆಂಡ್‌ ಹಾಗೂ ಕೀನ್ಯಾದಲ್ಲಿ ಆಡಲು ಕಿವೀಸ್‌ ನಿರಾಕರಿಸಿತ್ತು. ಆದರೆ ಇದೆಲ್ಲವೂ 4 ತಂಡಗಳು, ಕ್ರಿಕೆಟ್‌ ಮಂಡಳಿಗಳ ನಿರ್ಧಾರವಾಗದೆ ಅಲ್ಲಿನ ಸರ್ಕಾರಗಳ ನಿರ್ಧಾರವಾಗಿತ್ತು. ಹೀಗಾಗಿ ಐಸಿಸಿ ದಂಡ ವಿಧಿಸಿರಲಿಲ್ಲ. ಐಸಿಸಿ ವಾರ್ಷಿಕ ಆದಾಯವೂ ಈ ದೇಶಗಳಿಗೆ ಲಭಿಸಿದ್ದವು. ಈಗ ಪಿಸಿಬಿಯನ್ನು ರಕ್ಷಿಸುವ ಉದ್ದೇಶದಿಂದ ಪಾಕ್‌ ಸರ್ಕಾರವೇ ಬಹಿಷ್ಕಾರ ಘೋಷಣೆ ಮಾಡಿದೆ.