Asianet Suvarna News Asianet Suvarna News

ಪಾಕಿಸ್ತಾನ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟ

ಪಾಕಿಸ್ತಾನ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ
ಡಿಸೆಂಬರ್ 26ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭ
ನಾಯಕನಾಗಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಲಿರುವ ಟಿಮ್ ಸೌಥಿ

Pak vs NZ Ish Sodhi and Glenn Phillips return to New Zealand Test squad kvn
Author
First Published Dec 15, 2022, 4:03 PM IST

ವೆಲ್ಲಿಂಗ್ಟನ್‌(ಡಿ.15): ಡಿಸೆಂಬರ್ 26ರಿಂದ ಪಾಕಿಸ್ತಾನ ವಿರುದ್ದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ನೂತನ ನಾಯಕ ಟಿಮ್ ಸೌಥಿ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ. 15 ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಅನುಭವಿ ಸ್ಪಿನ್ನರ್ ಇಶ್ ಸೋಧಿ ಹಾಗೂ ಗ್ಲೆನ್ ಫಿಲಿಫ್ಸ್‌ ತಂಡ ಕೂಡಿಕೊಂಡಿದ್ದಾರೆ. 

ಕೇನ್ ವಿಲಿಯಮ್ಸನ್‌, ನ್ಯೂಜಿಲೆಂಡ್ ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿದ ಬಳಿಕ ಟಿಮ್ ಸೌಥಿ ಇದೀಗ ನೂತನ ನಾಯಕರಾಗಿದ್ದು, ಪಾಕ್‌ ಪ್ರವಾಸವು ಸೌಥಿ ಪಡೆ ಪಾಲಿಗೆ ಅಗ್ನಿ ಪರೀಕ್ಷೆ ಎನಿಸಿಕೊಂಡಿದೆ. ಪಾಕ್ ಎದುರಿನ ಸರಣಿಗೆ ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಕೈಲ್ ಜೇಮಿಸನ್ ಅಲಭ್ಯರಾಗಿದ್ದು, ಈ ಇಬ್ಬರು ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ಬೌಲಿಂಗ್ ಪಡೆ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಜೋರಾಗಿದೆ.

ಇನ್ನು ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿರುವ ಬ್ಲೈರ್ ಟಿಕ್ನರ್‌ 15 ಆಟಗಾರರನ್ನೊಳಗೊಂಡು ನ್ಯೂಜಿಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೇನ್ ವಿಲಿಯಮ್ಸನ್‌, ಓರ್ವ ಬ್ಯಾಟರ್‌ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದು, ಟಾಮ್ ಲೇಥಮ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಎರಡು ಪಂದ್ಯಗಳ ಟೆಸ್ಟ್‌ ಸರಣಿಯು ನ್ಯೂಜಿಲೆಂಡ್ ಪಾಲಿಗೆ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕಡೆಯ ಸರಣಿ ಎನಿಸಿಕೊಂಡಿದೆ. ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ನ್ಯೂಜಿಲೆಂಡ್ ತಂಡವು ಈಗಾಗಲೇ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಿಂದ ಹೊರಬಿದ್ದಿದೆ.

ನ್ಯೂಜಿಲೆಂಡ್ ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿದ ಕೇನ್ ವಿಲಿಯಮ್ಸನ್‌..! ವೇಗಿ ಟಿಮ್ ಸೌಥಿ ನೂತನ ನಾಯಕ..!

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಂದು ಕರಾಚಿಯಲ್ಲಿ ಆರಂಭವಾಗಲಿದೆ. ಇನ್ನು ಜನವರಿ 03ರಿಂದ ಮುಲ್ತಾನ್‌ನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.

ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ:

ಟಿಮ್ ಸೌಥಿ(ನಾಯಕ), ಮಿಚೆಲ್‌ ಬ್ರಾಸ್‌ವೆಲ್‌, ಟಾಮ್ ಬ್ಲಂಡೆಲ್(ವಿಕೆಟ್ ಕೀಪರ್), ಡೆವೊನ್ ಕಾನ್‌ವೇ, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಲ್ ಮಿಚೆಲ್, ಹೆನ್ರಿ ನಿಕೊಲ್ಸ್‌, ಅಜಾಜ್ ಪಟೇಲ್, ಗ್ಲೆನ್ ಫಿಲಿಫ್ಸ್‌, ಇಶ್ ಸೋಧಿ, ಬ್ಲೈರ್ ಟಿಕ್ನರ್, ನೀಲ್ ವ್ಯಾಗ್ನರ್, ಕೇನ್ ವಿಲಿಯಮ್ಸನ್, ವಿಲ್ ಯಂಗ್.
 

Follow Us:
Download App:
  • android
  • ios