ವಿಶ್ವದ ಕಿರಿಯ ಅಜ್ಜನಾದೆ ಎನ್ನುತ್ತಿದ್ದಾರೆ ಪಾಕ್‌ನ ಈ ದಿಗ್ಗಜ ಕ್ರಿಕೆಟರ್..!
ಶಾಹೀನ್ ಅಫ್ರಿದಿ ಹಾಗೂ ಅನ್ಶಾ ಅಫ್ರಿದಿ ದಂಪತಿ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಇದರ ಬೆನ್ನಲ್ಲೇ 47 ವರ್ಷದ ಶಾಹಿದ್ ಅಫ್ರಿದಿ, ಜಗತ್ತಿನ ಅತಿಕಿರಿಯ ಕ್ರಿಕೆಟ್ ಅಜ್ಜ ಎನಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ದಿಗ್ಗಜ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇದೀಗ ಅಜ್ಜನಾಗಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಶಾಹಿದ್ ಅಫ್ರಿದಿ ಪುತ್ರಿ ಹಾಗೂ ಎಡಗೈ ವೇಗಿ ಶಾಹೀನ್ ಅಫ್ರಿದಿ ಪತ್ನಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ವಿಚಾರವನ್ನು ಶಾಹಿದ್ ಅಫ್ರಿದಿ ಅತ್ಯಂತ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಈ ಖುಷಿಯ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದಂತೆಯೇ ಅವರ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಸುರಿಸಿದ್ದಾರೆ. ಶಾಹಿದ್ ಅಫ್ರಿದಿ ಪುತ್ರಿ ಅನ್ಶಾ ಕಳೆದ 2023ರ ಫೆಬ್ರವರಿಯಲ್ಲಿ ಪಾಕ್ ವೇಗಿ ಶಾಹೀನ್ ಅಫ್ರಿದಿಯನ್ನು ಮದುವೆಯಾಗಿದ್ದರು. ಇದೀಗ ಅನ್ಶಾ ಹಾಗೂ ಶಾಹೀನ್ ಅಫ್ರಿದಿ ದಂಪತಿ ಮುದ್ದಾದ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಈ ಗಂಡು ಮಗುವಿಗೆ ಶಾಹೀನ್ ಹಾಗೂ ಅನ್ಶಾ ಜೋಡಿ ಅಲಿಯಾರ್ ಅಫ್ರಿದಿ ಎನ್ನುವ ಹೆಸರನ್ನಿಟ್ಟಿದ್ದಾರೆ. ಇದೀಗ 47 ವರ್ಷದ ಅಫ್ರಿದಿ ಕುಟುಂಬವು ಶನಿವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದೆ.
"ನೀವು ಕ್ರಿಕೆಟ್ ಜಗತ್ತಿನ ಅತ್ಯಂತ ಕಿರಿಯ ಅಜ್ಜನಾಗುತ್ತಿರುವ ಕುರಿತು ನಿಮ್ಮ ಸ್ನೇಹಿತರೆಲ್ಲರಿಂದ ಪ್ರೀತಿಯ ಸಂದೇಶಗಳನ್ನು ಸ್ವೀಕರಿಸುತ್ತಿದ್ದೀರಿ. ನಮ್ಮ ಸಂತೋಷದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದಕ್ಕಾಗಿ ನನ್ನ ಕುಟುಂಬ ಮತ್ತು ನಾನು ನಮ್ಮ ಹೃದಯದ ಕೆಳಗಿನಿಂದ ಎಲ್ಲರಿಗೂ ಧನ್ಯವಾದಗಳು" ಎಂದು ಶಾಹಿದ್ ಅಫ್ರಿದಿ ಬರೆದುಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಕೆಟ್ಟ ರೆಕಾರ್ಡ್‌ಗಳಿವು - ಗಂಭೀರ್ ಹ್ಯಾಟ್ರಿಕ್ ಡಕ್ ಔಟ್, ಡಿಕೆ 18 ಬಾರಿ ಡಕ್ ಔಟ್!
ಇನ್ನು ಶಾಹೀನ್ ಅಫ್ರಿದಿ ಕೂಡಾ ತಾವು ತಂದೆಯಾಗುತ್ತಿರುವುದಕ್ಕೆ ಮೈದಾನದಲ್ಲಿಯೇ ಸಂಭ್ರಮಾಚರಣೆ ಮಾಡಿದ ವಿಡಿಯೋ ಕೂಡಾ ವೈರಲ್ ಆಗಿತ್ತು. ಬಾಂಗ್ಲಾದೇಶ ಎದುರಿನ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಹಸನ್ ಮೆಹಮೂದ್ ಅವರನ್ನು ಬಲಿ ಪಡೆದ ಬಳಿಕ ಶಾಹೀನ್ ಅಫ್ರಿದಿ ಮಗುವನ್ನು ಕೈಯಲ್ಲಿ ತೂಗುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ಗಮನ ಸೆಳೆದಿದ್ದರು.
ಎರಡೆರಡು ಬಾರಿ ಮದುವೆ ಸಂಭ್ರಮಾಚರಣೆ ಮಾಡಿದ್ದ ಶಾಹೀನ್-ಅನ್ಶಾ ಜೋಡಿ:
ಹೌದು, ಶಾಹೀನ್ ಅಫ್ರಿದಿ ಹಾಗೂ ಅನ್ಶಾ ಅಫ್ರಿದಿ ಜೋಡಿ 2023ರ ಫೆಬ್ರವರಿಯಲ್ಲಿ ಕರಾಚಿಯಲ್ಲಿನ ಸ್ಥಳೀಯ ಮಸೀದಿಯೊಂದರಲ್ಲಿ ನಿಖಾ ಮಾಡಿಕೊಂಡಿದ್ದರು. ಈ ನಿಖಾ ಕಾರ್ಯಕ್ರಮದಲ್ಲಿ ಕುಟುಂಬ ವರ್ಗದವರು ಹಾಗೂ ಕೆಲವೇ ಕೆಲವು ಆಪ್ತ ಸ್ನೇಹಿತರಷ್ಟೇ ಪಾಲ್ಗೊಂಡಿದ್ದರು. ಇನ್ನು ಇದಾದ ಬಳಿಕ 2023ರ ಸೆಪ್ಟೆಂಬರ್‌ನಲ್ಲಿ ಈ ದಂಪತ್ಯ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಇಸ್ಲಾಮಾಬಾದ್‌ನಲ್ಲಿ ಮಾಡಿದ್ದರು. ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಬಾಬರ್ ಅಜಂ. ಶಾದಾಬ್ ಖಾನ್, ಇಮಾಮ್ ಉಲ್ ಹಕ್, ಹ್ಯಾರಿಸ್ ರೌಫ್ ಸೇರಿದಂತೆ ಪಾಕಿಸ್ತಾನದ ಹಲವು ಸೆಲಿಬ್ರಿಟಿ ಕ್ರಿಕೆಟಿಗರು ಪಾಲ್ಗೊಂಡಿದ್ದರು.