ಕ್ಯಾನ್‌ಬೆರ್ರಾ(ಡಿ.03): ಭಾರತ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗುತ್ತಿರುವ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಬಾಧಿಸುತ್ತಿದೆ. ಈಗಾಗಲೇ ಡೇವಿಡ್‌ ವಾರ್ನರ್ ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದಿದ್ದಾರೆ.

ಇದೀಗ ಆಸ್ಪ್ರೇಲಿಯಾ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್ ಗಾಯಗೊಂಡ ಕಾರಣ, ಭಾರತ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು. ಸ್ಟಾರ್ಕ್, ಬೆನ್ನುಹುರಿ ಹಾಗೂ ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಾಯಕ ಫಿಂಚ್‌ ಹೇಳಿದ್ದಾರೆ. 

ಭಾರತ ವಿರುದ್ದದ ಏಕದಿನ ಸರಣಿಯಲ್ಲಿ ಮಿಚೆಲ್ ಸ್ಟಾರ್ಕ್ ಅವರ ಪ್ರದರ್ಶನ ಅಷ್ಟೇನು ಮಾರಕವಾಗಿರಲಿಲ್ಲ. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ 147 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತವಾಗಿದ್ದರು.

ಕೊನೆಯ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ

ಸ್ಟಾರ್ಕ್ ಗಾಯಗೊಳ್ಳುವ ಮೂಲಕ, ಆಸೀಸ್‌ ತಂಡದ ಗಾಯಾಳುಗಳ ಸಂಖ್ಯೆ 2ಕ್ಕೇರಿದೆ. 2ನೇ ಪಂದ್ಯದಲ್ಲಿ ಆರಂಭಿಕ ಡೇವಿಡ್‌ ವಾರ್ನರ್‌ ಗಾಯಗೊಂಡಿದ್ದರು. ಇನ್ನು ಮತ್ತೋರ್ವ ವೇಗಿ ಪ್ಯಾಟ್‌ ಕಮಿನ್ಸ್‌ಗೆ ಟೆಸ್ಟ್‌ ಸರಣಿಗೆ ಸಜ್ಜಾಗುವ ಉದ್ದೇಶದಿಂದಾಗಿ ವಿಶ್ರಾಂತಿ ನೀಡಲಾಗಿದೆ. ಇದರ ಲಾಭ ಪಡೆದ ಟೀಂ ಇಂಡಿಯಾ ಕೊನೆಯ ಪಂದ್ಯವನ್ನು 13 ರನ್‌ಗಳಿಂದ ಜಯಿಸಿತ್ತು.

ಶನಿವಾರದಿಂದ ಟಿ20 ಸರಣಿ:

ಭಾರತ ಹಾಗೂ ಆಸ್ಪ್ರೇಲಿಯಾ ನಡುವಣ 3 ಪಂದ್ಯಗಳ ಟಿ20 ಸರಣಿ ನಾಳೆಯಿಂದ ಆರಂಭವಾಗಲಿದೆ. ಡಿ.4 ರಂದು ಕ್ಯಾನ್‌ಬೆರ್ರಾ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಡಿ.6 ಕ್ಕೆ 2ನೇ ಟಿ20 ಹಾಗೂ ಡಿ. 8ರಂದು 3ನೇ ಟಿ20 ಪಂದ್ಯ ನಡೆಯಲಿದೆ. 

ಕೊನೆಯ 2 ಟಿ20 ಪಂದ್ಯಗಳಿಗೆ ಸಿಡ್ನಿ ಕ್ರೀಡಂಗಣದ ಆತಿಥ್ಯ ವಹಿಸಲಿದೆ. ಡಿ. 6 ರಂದು ಸಿಡ್ನಿಯ ಮತ್ತೊಂದು ಮೈದಾನವಾದ ಡ್ರುಮ್ಯೊನೇ ಓವಲ್‌ನಲ್ಲಿ ಭಾರತ ‘ಎ’ ಮತ್ತು ಆಸ್ಪ್ರೇಲಿಯಾ ‘ಎ’ ನಡುವಣ ಮೊದಲ ಅಭ್ಯಾಸ ಪಂದ್ಯ ನಡೆಯಲಿದೆ.