ಕ್ಯಾನ್‌ಬೆರ್ರಾ(ಡಿ.02): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 13 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸತತ ಸೋಲುಗಳ ಬಳಿಕ ಟೀಂ ಇಂಡಿಯಾ ಗೆಲುವಿನ ಹಳಿಗೆ ಮರಳಲು ಯಶಸ್ವಿಯಾಗಿದೆ. ಈ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಭಾರತ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಆಸರೆಯಾದರೆ, ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್ ಹಾಗೂ ಟಿ. ನಟರಾಜನ್ ಅಗತ್ಯ ಸಂದರ್ಭದಲ್ಲಿ ವಿಕೆಟ್‌ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತ ನೀಡಿದ್ದ 303 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಮಾರ್ನಸ್ ಲಬುಶೇನ್ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಟಿ. ನಟರಾಜನ್ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಲಬುಶೇನ್ 7 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಸ್ಟೀವ್ ಸ್ಮಿತ್ ವಿಕೆಟ್ ಕಬಳಿಸುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದರು.
ಭಾರತದ ಉತ್ತಮ ಆರಂಭದ ಹೊರತಾಗಿಯೂ ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಹಾಗೂ ಮೊಯಿಸ್ ಹೆನ್ರಿಕೇಸ್ ಮೂರನೇ ವಿಕೆಟ್‌ಗೆ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮತ್ತೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದರು. ಹೆನ್ರಿಕೇಸ್ 22 ರನ್ ಬಾರಿಸಿ ಧವನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ನಾಯಕ ಆ್ಯರೋನ್ ಫಿಂಚ್ ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಫಿಂಚ್ 82 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 75 ರನ್ ಬಾರಿಸಿ ಜಡೇಜಾ ಬೌಲಿಂಗ್‌ನಲ್ಲಿ ಧವನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಅಲೆಕ್ಸ್ ಕ್ಯಾರಿ(38) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(59) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ಬುಮ್ರಾ ಬೌಲಿಂಗ್‌ನಲ್ಲಿ ಮ್ಯಾಕ್ಸ್‌ವೆಲ್ ವಿಕೆಟ್‌ ಪತನದೊಂದಿಗೆ ಪಂದ್ಯ ಟೀಂ ಇಂಡಿಯಾ ಪರ ವಾಲುವಂತೆ ಆಯಿತು.

ಭಾರತ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಟಿ ನಟರಾಜನ್ 2, ಜಸ್ಪ್ರೀತ್ ಬುಮ್ರಾ 2 ಹಾಗೂ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 

ಇದಕ್ಕೂ ಮೊದಲು ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭಿಕ ಆಘಾತದ ಹೊರತಾಗಿಯೂ ನಾಯಕ ವಿರಾಟ್ ಕೊಹ್ಲಿಯ ಸಮಯೋಚಿತ ಅರ್ಧಶತಕ(63) ಹಾಗೂ ಕೊನೆಯಲ್ಲಿ ರವೀಂದ್ರ ಜಡೇಜಾ(66*) ಹಾಗೂ ಹಾರ್ದಿಕ್ ಪಾಂಡ್ಯ(92*) ಆರನೇ ವಿಕೆಟ್‌ಗೆ ಮುರಿಯದ 150 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರ್:

ಭಾರತ: 302/5
ಹಾರ್ದಿಕ್ ಪಾಂಡ್ಯ: 92
ರವೀಂದ್ರ ಜಡೇಜಾ: 66
ಆಸ್ಟನ್ ಅಗರ್: 44/2

ಆಸ್ಟ್ರೇಲಿಯಾ: 
ಆ್ಯರೋನ್ ಫಿಂಚ್: 75
ಗ್ಲೆನ್ ಮ್ಯಾಕ್ಸ್‌ವೆಲ್: 59
ಶಾರ್ದೂಲ್ ಠಾಕೂರ್: 51/3