ಅಹಮದಾಬಾದ್‌ನಲ್ಲಿಂದು ಲಖನೌ-ಗುಜರಾತ್ ಮುಖಾಮುಖಿಸಹೋದರರ ಸವಾಲಿಗೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯಇದೊಂದು ಭಾವನಾತ್ಮಕ ಕ್ಷಣವೆಂದ ಹಾರ್ದಿಕ್ ಪಾಂಡ್ಯ
ಅಹಮದಾಬಾದ್(ಮೇ.07): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 51ನೇ ಪಂದ್ಯವು ಸಹೋದರರ ಸವಾಲಿಗೆ ಸಾಕ್ಷಿಯಾಗಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದರೆ, ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಕೃನಾಲ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಈ ಐತಿಹಾಸಿಕ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಅಣ್ಣ ಕೃನಾಲ್ ಪಾಂಡ್ಯ ಎದುರು ನಾಯಕನಾಗಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿರುವುದರ ಬಗ್ಗೆ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ಇದೊಂದು ರೀತಿಯ ಭಾವನಾತ್ಮಕ ಕ್ಷಣ. ಬೇರೆ ಬೇರೆ ತಂಡವನ್ನು ನಾವು ಮುನ್ನಡೆಸುತ್ತಿದ್ದರೂ ಸಹಾ ನಮ್ಮ ತಂದೆ ಈ ಕ್ಷಣ ನೋಡಿ ಹೆಮ್ಮೆ ಪಡುತ್ತಿರಬಹುದು ಎಂದು ಹೇಳಿದ್ದಾರೆ. ಇದಷ್ಟೇ ಅಲ್ಲದೇ ನಮ್ಮ ಕುಟುಂಬ ಯಾವೊಬ್ಬರಿಗೂ ಬೆಂಬಲಿಸಲು ಸಾಧ್ಯವಾಗುತ್ತಿಲ್ಲ. ಇಬ್ಬರಲ್ಲಿ ಒಬ್ಬ ಪಾಂಡ್ಯ ಮಾತ್ರ ಖಂಡಿತವಾಗಿ ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ.
ಟಾಸ್ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ, "ನಾವೂ ಕೂಡಾ ಮೊದಲು ಬ್ಯಾಟ್ ಮಾಡಲು ಬಯಸಿದ್ದೆವು. ನಾನು ಅವರಿಗೆ ಹೇಳಿದ್ದೆ ಟಾಸ್ ಬಗ್ಗೆ ರಹಸ್ಯವಾಗಿಟ್ಟುಕೊ. ಸಹಜವಾಗಿಯೇ ಇದೊಂದು ರೀತಿಯ ಭಾವನಾತ್ಮಕ ದಿನ. ನನ್ನ ತಂದೆ ನಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿರಬಹುದು. ಅವರು ಈ ರೀತಿ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದರು. ನಮ್ಮ ಹುಡುಗರು ಈ ಪಂದ್ಯವನ್ನು ಗೆಲ್ಲಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
IPL 2023: ಗುಜರಾತ್ ಎದುರು ಟಾಸ್ ಗೆದ್ದ ಲಖನೌ ಬೌಲಿಂಗ್ ಆಯ್ಕೆ
ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್, ಮೇ 01ರಂದು ಆರ್‌ಸಿಬಿ ಎದುರಿನ ಪಂದ್ಯದ ವೇಳೆ ಗಾಯಗೊಂಡು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಕೆ ಎಲ್ ರಾಹುಲ್ ಬದಲಿಗೆ ಕೃನಾಲ್ ಪಾಂಡ್ಯ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
14 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಗುಜರಾತ್ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಬಹುತೇಕ ಖಚಿತವಾಗಲಿದೆ. ಮತ್ತೊಂದೆಡೆ ಗೆಲುವಿನ ಲಯಕ್ಕೆ ಮರಳಿ ಅಗ್ರ-4ರಲ್ಲೇ ಉಳಿದುಕೊಳ್ಳಲು ಲಖನೌ ಸೂಪರ್ ಕಾಯುತ್ತಿದೆ.
ತಂಡಗಳು ಹೀಗಿವೆ ನೋಡಿ:
ಗುಜರಾತ್ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹಮ್ಮದ್, ಮೊಹ್ಮಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಮೋಹಿತ್ ಶರ್ಮಾ.
ಲಖನೌ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ಮನನ್ ವೋಹ್ರಾ, ದೀಪಕ್ ಹೂಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ(ನಾಯಕ), ಕೃಷ್ಣಪ್ಪ ಗೌತಮ್, ನವೀನ್ ಉಲ್ ಹಕ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಆವೇಶ್ ಖಾನ್.
ಪಂದ್ಯ: ಮಧ್ಯಾಹ್ನ 3.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
