Asianet Suvarna News Asianet Suvarna News

ಒಂದು ಸಿಕ್ಸ್‌ನಿಂದ ಭಾರತ ವಿಶ್ವಕಪ್‌ ಗೆದ್ದಿದ್ದಲ್ಲ; ಗೌತಮ್‌ ಗಂಭೀರ್ ಕಿಡಿ

ಯಾರೊಬ್ಬರಿಂದ ಭಾರತ ಏಕದಿನ ವಿಶ್ವಕಪ್ ಗೆದ್ದಿಲ್ಲ, ಆದರೆ ದುರಾದೃಷ್ಟವೆಂದರೆ ಭಾರತದಲ್ಲಿ ಕೆಲವರ ವ್ಯಕ್ತಪೂಜೆ ನಡೆಯುತ್ತಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಲೇವಡಿ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

One Six Didnt Win Us The World Cup Says Former Cricketer Gautam Gambhir kvn
Author
New Delhi, First Published Apr 2, 2021, 4:56 PM IST

ನವದೆಹಲಿ(ಏ.02): ಯಾರೊಬ್ಬರಿಂದ ಅಥವಾ ಒಂದು ಸಿಕ್ಸರ್‌ನಿಂದಾಗಿ ನಾವು 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಜಯಿಸಿಲ್ಲ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಹಾಲಿ ಸಂಸದ ಗೌತಮ್‌ ಗಂಭೀರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಏಪ್ರಿಲ್‌ 02, 2011ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಎಂ.ಎಸ್. ಧೋನಿ ನೇತೃತ್ವದ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದರೊಂದಿಗೆ ಭಾರತ ಎರಡನೇ ಬಾರಿಗೆ ಏಕದಿನ ವಿಶ್ವಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಇದಕ್ಕೂ ಮೊದಲು 1983ರಲ್ಲಿ ಕಪಿಲ್‌ ದೇವ್‌ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿದ ಸಾಧನೆ ಮಾಡಿತ್ತು

ಇದೀಗ ಟೀಂ ಇಂಡಿಯಾ ಏಕದಿನ ವಿಶ್ವಕಪ್‌ ಗೆಲುವಿನ ದಶಮಾನೋತ್ಸವದ ಸಂಭ್ರಮಾಚರಣೆ ಮಾಡುತ್ತಿದೆ. ಕಳೆದ ವರ್ಷ ಪ್ರತಿಷ್ಠಿತ ಕ್ರೀಡಾ ವೆಬ್‌ಸೈಟ್‌ ಎಂ ಎಸ್ ಧೋನಿ ಬಾರಿಸಿದ್ದ ವಿನ್ನಿಂಗ್ ಶಾಟ್ ಫೋಟೋದೊಂದಿಗೆ ಈ ಒಂದು ಶಾಟ್‌ ಕೋಟ್ಯಾಂತರ ಭಾರತೀಯರನ್ನು ಸಂಭ್ರಮದ ಹೊಳೆಯಲ್ಲಿ ತೇಲುವಂತೆ ಮಾಡಿತ್ತು ಎಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದ ಗಂಭೀರ್, ನೆನಪಿರಲಿ ವಿಶ್ವಕಪ್‌ ಗೆದ್ದಿದ್ದು ಇಡೀ ಭಾರತ. ಇಡೀ ಭಾರತ ಕ್ರಿಕೆಟ್ ತಂಡ ಹಾಗೂ ಎಲ್ಲಾ ಸಹಾಯಕ ಸಿಬ್ಬಂದಿ. ಆ ಒಂದು ಸಿಕ್ಸರ್‌ನಿಂದ ಭಾರತ ಗೆದ್ದಿತು ಎನ್ನುವ ಭ್ರಾಂತಿಯಿಂದ ಹೊರಬರಲು ಇದು ಸಕಾಲ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಕಿವಿಹಿಂಡಿದ್ದರು.

ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್‌ ಗೆಲುವಿಗೆ 10 ವರ್ಷದ ಸಂಭ್ರಮ..!

ಇದಾಗಿ ಸರಿಯಾಗಿ ಒಂದು ವರ್ಷಗಳ ಬಳಿಕ ಮತ್ತೊಮ್ಮೆ ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಗೌತಮ್‌ ಗಂಭೀರ್ ಮತ್ತೊಮ್ಮೆ ಅದೇ ವಿಚಾರವನ್ನು ಮೆಲುಕು ಹಾಕಿದ್ದಾರೆ. ಕೇವಲ ಒಬ್ಬನಿಂದ ಮಾತ್ರ ವಿಶ್ವಕಪ್ ಗೆದ್ದಿದ್ದೇವೆ ಎಂದು ನಿಮಗೆ ಅನಿಸುತ್ತಿದೆಯೇ? ಒಂದು ವೇಳೆ ಒಬ್ಬ ಆಟಗಾರರ ವಿಶ್ವಕಪ್ ಗೆಲ್ಲಿಸಿಕೊಡುತ್ತಾನೆ ಎನ್ನುವುದಾದರೆ ಇಲ್ಲಿಯವರೆಗೆ ಎಲ್ಲಾ ವಿಶ್ವಕಪ್‌ಗಳನ್ನು ಭಾರತವೇ ಗೆಲ್ಲಬೇಕಿತ್ತು. ದುರಾದೃಷ್ಟವೆಂದರೆ ಭಾರತದಲ್ಲಿ ಕೆಲವು ಆಯ್ದ ವ್ಯಕ್ತಿಗಳನ್ನು ಮಾತ್ರ ವೈಭವೀಕರಿಸಲಾಗುತ್ತಿದೆ. ಈ ವಿಚಾರದಲ್ಲಿ ನನಗೆ ನಂಬಿಕೆಯಿಲ್ಲ. ಕ್ರಿಕೆಟ್‌ ಒಂದು ಟೀಂ ಸ್ಪೋರ್ಟ್, ಇಲ್ಲಿ ವ್ಯಕ್ತಿಗತ ವೈಭವೀಕರಣಕ್ಕೆ ಅವಕಾಶವಿಲ್ಲ. ಎಲ್ಲರೂ ತಂಡವಾಗಿ ಗೆಲುವಿಗೆ ಸಹಕರಿಸಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

2011ರ ಏಕದಿನ ವಿಶ್ವಕಪ್‌ ಗೆಲುವಿಗೆ ಜಹೀರ್ ಖಾನ್‌, ಸಚಿನ್‌ ತೆಂಡುಲ್ಕರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್ ಸೇರಿದಂತೆ ಎಲ್ಲಾ ಆಟಗಾರರು ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಒಂದು ಸಿಕ್ಸರ್‌ಗೆ ವಿಶ್ವಕಪ್‌ ಗೆಲ್ಲುವ ಸಾಮರ್ಥ್ಯವಿದ್ದರೆ, ಯುವರಾಜ್ ಸಿಂಗ್‌ ಟಿ20 ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಬಾರಿಸಿದ್ದು, ಯುವಿ 6 ವಿಶ್ವಕಪ್‌ ಭಾರತಕ್ಕೆ ಗೆದ್ದುಕೊಟ್ಟಂತೆ ಎಂದು ಏಕವ್ಯಕ್ತಿ ವೈಭವೀಕರಣವನ್ನು ಗಂಭೀರ್ ಲೇವಡಿ ಮಾಡಿದ್ದಾರೆ.
 

Follow Us:
Download App:
  • android
  • ios