ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆಲುವಿಗೆ 10 ವರ್ಷದ ಸಂಭ್ರಮ..!
ಭಾರತ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇಂದಿಗೆ 10 ವರ್ಷಗಳು ಕಳೆದಿವೆ. ಧೋನಿಯ ಚಾಣಾಕ್ಷ ನಾಯಕತ್ವ, ಗಂಭೀರ್ ಕೆಚ್ಚೆದೆಯ ಬ್ಯಾಟಿಂಗ್, ಯುವಿ ಎನ್ನುವ ಸವ್ಯಸಾಚಿಯ ಪ್ರದರ್ಶನದ ಮೆಲುಕು ಇಲ್ಲಿದೆ ನೋಡಿ.
ಬೆಂಗಳೂರು(ಏ.02): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ತವರಿನಲ್ಲಿ ಏಕದಿನ ವಿಶ್ವಕಪ್ ಜಯಿಸಿ ಇಂದಿಗೆ(ಏ.02, 2021) ಹತ್ತು ವರ್ಷಗಳು ಕಳೆದಿವೆ. 1983ರಲ್ಲಿ ಕಪಿಲ್ ದೇವ್ ಪಡೆ ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಜಯಿಸಿತ್ತು. ಇದಾದ ಬಳಿಕ ಅಂದರೆ ಬರೋಬ್ಬರಿ 28 ವರ್ಷಗಳ ಬಳಿಕ ಶ್ರೀಲಂಕಾವನ್ನು ಬಗ್ಗುಬಡಿದು ಭಾರತ ವಿಶ್ವಚಾಂಪಿಯನ್ ಆಗಿ ಮೆರೆದಾಡಿತ್ತು.
ಹೌದು, ಮುಂಬೈನ ವಾಂಖೆಡೆ ಮೈದಾನದಲ್ಲಿ ಏಪ್ರಿಲ್ 02, 2011ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಟೀಂ ಇಂಡಿಯಾ ತನ್ನ ದಶಕಗಳ ಕನಸನ್ನು ಮತ್ತೊಮ್ಮೆ ನನಸಾಗಿಸಿಕೊಂಡಿತ್ತು. ಜಹೀರ್ ಖಾನ್ ಚಾಣಾಕ್ಷ ಬೌಲಿಂಗ್, ಗೌತಮ್ ಗಂಭೀರ್ ಕೆಚ್ಚೆದೆಯ ಶತಕ ವಂಚಿತ ಬ್ಯಾಟಿಂಗ್, ಕ್ಯಾಪ್ಟನ್ ಕೂಲ್ ಧೋನಿಯ ಮನಮೋಹಕ ಸಿಕ್ಸರ್, ಯುವರಾಜ್ ಸಿಂಗ್ ಎನ್ನುವ ಸವ್ಯಸಾಚಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್‌ರನ್ನು ಯುವ ಕ್ರಿಕೆಟಿಗರು ಹೆಗಲಮೇಲೆ ಹೊತ್ತು ಮೈದಾನವೆಲ್ಲ ಸುತ್ತಿದ್ದು. ಹೀಗೆ ನೆನಪು ಮಾಡಿಕೊಳ್ಳುತ್ತಾ ಹೋದರೆ ನೆನಪಿನ ಸುರುಳಿಗಳು ಒಂದೊಂದು ಹೊರಬರುತ್ತವೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ, ಅನುಭವಿ ಬ್ಯಾಟ್ಸ್‌ಮನ್ ಮಹೇಲಾ ಜಯವರ್ಧನೆ ಅಜೇಯ ಶತಕ ಹಾಗೂ ಕೊನೆಯಲ್ಲಿ ತಿಸಾರ ಪೆರೇರಾ 9 ಎಸೆತಗಳಲ್ಲಿ 22 ರನ್‌ಗಳ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 274 ರನ್ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ ತನ್ನ ಖಾತೆಗೆ ರನ್ ಕಲೆಹಾಕುವುದರೊಳಗಾಗಿ ಸ್ಪೋಟಕ ಬ್ಯಾಟ್ಸ್‌ಮನ್ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ವಿಕೆಟ್ ಕಳೆದುಕೊಂಡಿತು. ಇದಾಗಿ ಕೆಲವೇ ಹೊತ್ತಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹ ಪೆವಿಲಿಯನ್ ಸೇರಿದಾಗ ವಾಂಖೆಡೆ ಸ್ಟೇಡಿಯಂನಲ್ಲಿ ಅಕ್ಷರಶಃ ನೀರವ ಮೌನ ಆವರಿಸಿತ್ತು.
ಆದರೆ ಮೂರನೇ ವಿಕೆಟ್‌ಗೆ ಜತೆಯಾದ ಡೆಲ್ಲಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ 83 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದಾದ ಬಳಿಕ ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಗಂಭೀರ್ 109 ರನ್‌ಗಳ ಜತೆಯಾಟವಾಡಿ ತಂಡವನ್ನು ಗೆಲುವಿನ ಸಮೀಪ ಕೊಂಡ್ಯೊಯ್ದರು. ಉತ್ತಮವಾಗಿ ಆಡುತ್ತಿದ್ದ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಕೇವಲ 3 ರನ್ ಅಂತರದಲ್ಲಿ ಶತಕವಂಚಿತರಾದರು. ಇದಾದ ಬಳಿಕ ಯುವರಾಜ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಜೋಡಿ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿತು.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಆಸ್ಪತ್ರೆಗೆ ದಾಖಲು..!
ಅದರಲ್ಲೂ ನಾಯಕ ಮಹೇಂದ್ರ ಸಿಂಗ್ ಧೋನಿ ಕೇವಲ 79 ಎಸೆತಗಳಲ್ಲಿ ಅಜೇಯ 91 ರನ್ ಬಾರಿಸಿ ನಾಯಕನ ಆಟವಾಡಿದರು. ಅದರ ಜತೆಗೆ ನುವಾನ್ ಕುಲಸೇಖರ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ವಿನ್ನಿಂಗ್ ಶಾಟ್ ಬಾರಿಸಿದ್ದು, ಕ್ರಿಕೆಟ್ ಅಭಿಮಾನಿಗಳ ಕಣ್ಣಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಅಂದಹಾಗೆ ಇಡೀ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಆಲ್ರೌಂಡ್ ಪ್ರದರ್ಶನ ತೋರಿ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾದ ಯುವರಾಜ್ ಸಿಂಗ್ ಪಾತ್ರವನ್ನು ಯಾರೂ ಮರೆಯುವಂತಿಲ್ಲ.