Asianet Suvarna News Asianet Suvarna News

ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 37 ವರ್ಷ..!

ಜೂನ್ 25, 1983 ಭಾರತ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲ್ಪಡುವ ದಿನ. ಮೂರನೇ ಏಕದಿನ ವಿಶ್ವಕಪ್‌ನಲ್ಲಿ ಬಲಿಷ್ಠ ವಿಂಡೀಸ್ ಬಗ್ಗು ಬಡಿದು ಚಾಂಪಿಯನ್ ಆದ ದಿನಕ್ಕೆ ಇಂದಿಗೆ 37 ವರ್ಷ ಕಳೆದಿದೆ. ಈ ವಿಶ್ವಕಪ್ ಜರ್ನಿಯ ಮೆಲುಕು ಇಲ್ಲಿದೆ ನೋಡಿ.

On this Day Team India 1983 World Cup Triumph Kapil devils a Giant Killer
Author
Bengaluru, First Published Jun 25, 2020, 2:08 PM IST

ಬೆಂಗಳೂರು(ಜೂ.25): ಭಾರತ ಕ್ರಿಕೆಟ್ ಇತಿಹಾಸದಲ್ಲಿ ಜೂನ್ 25, 1983ರ ದಿನ ಎಂದೆಂದಿಗೂ ಅವಿಸ್ಮರಣೀಯವಾದ ದಿನ. ಕಪಿಲ್ ಡೆವಿಲ್ಸ್ ಪಡೆ ಕೆರಿಬಿಯನ್ ದೈತ್ಯ ಸಂಹಾರ ಮಾಡಿ ಏಕದಿನ ವಿಶ್ವಕಪ್ ಎತ್ತಿಹಿಡಿದ ದಿನ. ಇಂದಿಗೆ 37 ವರ್ಷಗಳ ಹಿಂದೆ ಅಂತಹದ್ದೊಂದು ರೋಮಾಂಚಕ ಸನ್ನಿವೇಷಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದರು.

ಹೌದು, 1983ರ ವಿಶ್ವಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಕೇವಲ 40 ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿತ್ತು. ಇನ್ನು ಅಚ್ಚರಿ ಎಂದರೆ ಹಿಂದಿನ(1975 ಹಾಗೂ 1979) ಎರಡು ಏಕದಿನ ವಿಶ್ವಕಪ್ ಪಂದ್ಯಗಳನ್ನಾಡಿದ್ದ ಭಾರತ ಕೇವಲ ಒಂದು ಪಂದ್ಯವನ್ನಷ್ಟೇ ಜಯಿಸಿತ್ತು. ಆದರೆ 1983ರ ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಬಲಿಷ್ಠ ವೆಸ್ಟ್ ಇಂಡೀಸ್ ಪಡೆಯನ್ನು ಬಗ್ಗುಬಡಿದು ಕಪಿಲ್ ದೇವ್ ಪಡೆ ವಿಶ್ವಕಪ್ ಎತ್ತಿಹಿಡಿದಿತ್ತು. ಇದರ ಜತೆಗೆ ದೇಶದ ಕ್ರಿಕೆಟ್ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು ಎಂದರೆ ಅತಿಶಯೋಕ್ತಿಯಾಗಲಾರದು. 

ಯಾವ ನಿರೀಕ್ಷೆಯೂ ಇಲ್ಲದ ತಂಡ ವಿಶ್ವಕಪ್ ಗೆದ್ದಾಗ..!

ಮೂರನೇ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ಆತಿಥ್ಯವನ್ನು ವಹಿಸಿತ್ತು. ಕಪಿಲ್ ದೇವ್ ನೇತೃತ್ವದ ತಂಡ ವಿಶ್ವಕಪ್ ಆಡಲು ಇಂಗ್ಲೆಂಡ್‌ಗೆ ಹೊರಟಾಗ ಯಾರೂ ಕೂಡಾ ಈ ತಂಡ ವಿಶ್ವಕಪ್ ಗೆಲ್ಲಲಿದೆ ಎಂದು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಫೈನಲ್‌ನಲ್ಲಿ ಕೆರಿಬಿಯನ್ನರೆದುರು ಭಾರತ ಹೀನಾಯವಾಗಿ ಸೋಲಲಿದೆ ಎಂದು ಅಂದಾಜಿಸಿದವರೇ ಹೆಚ್ಚು. ಆದರೆ ಎಲ್ಲಾ ಕಲ್ಪನೆಗಳನ್ನು ತಲೆಕೆಳಗಾಗುವಂತೆ ಮಾಡಿದ ಕಪಿಲ್ ಡೆವಿಲ್ಸ್‌ ಪಡೆ ಅಸಾಧ್ಯವಾದುದನ್ನು ಸಾಧ್ಯವನ್ನಾಗಿ ಮಾಡಿ ತೋರಿಸಿದರು.

1983ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಾನಾಡಿದ ಚೊಚ್ಚಲ ಪಂದ್ಯದಲ್ಲಿ ಬಲಿಷ್ಠ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್‌ ಇಂಡೀಸ್ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ ಯಶ್‌ಪಾಲ್ ಶರ್ಮಾ ಅವರ ಸಮಯೋಚಿತ ಅರ್ಧಶತಕ(89)ದ ನೆರವಿನಿಂದ 262 ರನ್ ಬಾರಿಸಿತ್ತು. ಇದಕ್ಕುತ್ತವಾಗಿ ವಿಂಡೀಸ್ 228 ರನ್ ಗಳಿಸಲಷ್ಟೇ ಶಕ್ತವಾಯಿತು. ರೋಜರ್ ಬಿನ್ನಿ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಜಿಂಬಾಬ್ವೆ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ಸುಲಭ ಗೆಲುವು ಸಾಧಿಸಿತ್ತು. 

1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯದ ಸ್ಯಾಲರಿ; ಇಲ್ಲಿದೆ ಸಂಪೂರ್ಣ ವಿವರ!

ಎರಡು ಆಘಾತಕಾರಿ ಸೋಲು: ಮೊದಲೆರಡು ಪಂದ್ಯ ಗೆದ್ದು ಬೀಗುತ್ತಿದ್ದ ಕಪಿಲ್ ಪಡೆಗೆ ಆಸೀಸ್ ಮರ್ಮಾಘಾತ ನೀಡಿತ್ತು, ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಬಳಿಕ ಮತ್ತೆ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತು. ವಿವ್ ರಿಚರ್ಡ್ಸನ್ ಬಾರಿಸಿದ ಶತಕ ಚೊಚ್ಚಲ ಪಂದ್ಯದ ಸೋಲಿಗೆ ತಿರುಗೇಟು ಕೊಟ್ಟಂತಿತ್ತು.

ಕಪಿಲ್ ಪಡೆ ಟೂರ್ನಿಯಲ್ಲಿ ಉಳಿದುಕೊಳ್ಳಬೇಕಾದರೆ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಜಿಂಬಾಬ್ವೆ ವಿರುದ್ಧ ಟನ್‌ಬ್ರಿಡ್ಜ್‌ ವೆಲ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿಗೆ ಸಿಲುಕಿತ್ತು. ಈ ಪಂದ್ಯದಲ್ಲಿ ಭಾರತ ಕೇವಲ 17 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗಿಳಿದ ಕಪಿಲ್ ದೇವ್ 138 ಎಸೆತಗಳಲ್ಲಿ 16 ಸಿಕ್ಸರ್ ಹಾಗೂ 6 ಬೌಂಡರಿ ನೆರವಿನಿಂದ 175 ರನ್ ಚಚ್ಚಿದರು. ನಾಯಕನ ಆಟವಾಡುವ ಮೂಲಕ ಕಪಿಲ್ ಭಾರತಕ್ಕೆ 31 ರನ್‌ಗಳ ರೋಚಕ ಗೆಲುವು ತಂದಿತ್ತರು. ದುರಾದೃಷ್ಟವೆಂದರೆ ಈ ಅಮೋಘ ಪಂದ್ಯ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ.

ಕಪಿಲ್ ಪಡೆಯ ಮಿಂಚಿನೋಟ: ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಆಘಾತಕಾರಿಯಾಗಿ ಮಣಿಸುವ ಮೂಲಕ ಕಪಿಲ್ ಪಡೆ ಸೆಮಿಫೈನಲ್‌ ಪ್ರವೇಶಿಸಿತು. ಸೆಮಿಫೈನಲ್‌ನಲ್ಲಿ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಭಾರತ ಫೈನಲ್ ಪ್ರವೇಶಿಸಿತು.

ಲಾರ್ಡ್ಸ್‌ನಲ್ಲಿ ಐತಿಹಾಸಿಕ ಫೈನಲ್ ಪಂದ್ಯ:

ಈಗಾಗಲೇ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡ ಸುಲಭವಾಗಿ ಭಾರತವನ್ನು ಮಣಿಸುವ ಲೆಕ್ಕಾಚಾರದಲ್ಲಿತ್ತು. ಟಾಸ್ ಗೆದ್ದ ವಿಂಡೀಸ್ ನಾಯಕ ಕ್ಲೈವ್ ಲಾಯ್ಡ್ ಭಾರತವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿತು. ಕೃಷ್ಣಮಾಚಾರಿ ಶ್ರೀಕಾಂತ್(38) ಅಲ್ಪ ಪ್ರತಿರೋಧದ ನೆರವಿನಿಂದ ಭಾರತ ಕೇವಲ 183 ರನ್ ಗಳನ್ನು ಕಲೆಹಾಕಿತು. ಆಗಲೂ ವಿಂಡೀಸ್ ಸುಲಭ ಜಯ ಸಾಧಿಸಲಿದೆ ಎಂದೇ ಲೆಕ್ಕಾಚಾರ ಹಾಕಿದ್ದರು. ಆದರೆ ಕಪಿಲ್ ಪಡೆ ಕಳೆದುಕೊಳ್ಳುವುದು ಏನು ಇಲ್ಲ ಎನ್ನುವಂತೆ ಮೈಚಳಿ ಬಿಟ್ಟು ಬೌಲಿಂಗ್ ಮಾಡಲು ಇಳಿಯಿತು. ಪರಿಣಾಮ ವಿಂಡೀಸ್ ನಿಗದಿತ 60 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 140 ರನ್ ಬಾರಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕಪಿಲ್ ಪಡೆ ಲಾರ್ಡ್ಸ್ ಬಾಲ್ಕನಿಯಲ್ಲಿ ವಿಶ್ವಕಪ್ ಎತ್ತಿ ಹಿಡಿದು ಕುಣಿದು ಕುಪ್ಪಳಿಸಿತು.

Follow Us:
Download App:
  • android
  • ios