World Cup 2023: ಕಿವೀಸ್‌ನ ಬೌಲಿಂಗ್ ಬೇಲಿ, ಚೆನ್ನೈಯಲ್ಲಿ ಆಫ್ಘಾನ್ ಗಲಿಬಿಲಿ
ಕಳೆದ ಪಂದ್ಯದಲ್ಲಿ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿದ ವಿಶ್ವಾಸದಲ್ಲಿದ್ದ ಅಫ್ಘಾನಿಸ್ಥಾನ ತಂಡ, ಬುಧವಾರದ ಪಂದ್ಯದಲ್ಲಿ ಏಕದಿನ ವಿಶ್ವಕಪ್ ರನ್ನರ್‌ಅಪ್ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರೀ ಸೋಲು ಕಂಡಿದೆ.
ಚೆನ್ನೈ ಅ.18): ಕೆಲ ದಿನಗಳ ಹಿಂದೆ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ತನ್ನ ಸ್ಮರಣೀಯ ಗೆಲುವು ದಾಖಲು ಮಾಡಿದ್ದ ಅಫ್ಘಾನಿಸ್ತಾನ ತಂಡ ಬುಧವಾರ ಏಕದಿನ ವಿಶ್ವಕಪ್ ರನ್ನರ್‌ಅಪ್ ನ್ಯೂಜಿಲೆಂಡ್ ವಿರುದ್ಧ ಭಾರೀ ಸೋಲು ಕಂಡಿದೆ. ಇಂಗ್ಲೆಂಡ್ ತಂಡವನ್ನು ಮಣಿಸಿದ ವಿಶ್ವಾಸದಲ್ಲಿದ್ದ ಅಫ್ಘಾನಿಸ್ತಾನ ತಂಡ, ನ್ಯೂಜಿಲೆಂಡ್ ವಿರುದ್ಧವೂ ಉತ್ತಮ ಆರಂಭ ಕಂಡಿತ್ತಾದರೂ ಇದರ ಲಾಭವನ್ನು ಪಡೆದುಕೊಳ್ಳಲು ವಿಫಲವಾಯಿತು. ಇದರಿಂದಾಗಿ ತಂಡ 149 ರನ್‌ಗಳ ಭಾರೀ ಅಂತರದ ಸೋಲು ಕಂಡಿತು. ಸ್ಪಿನ್ ಸ್ನೇಹಿ ಎಂಎ ಚಿದಂಬರಂ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಒಂದು ಹಂತದಲ್ಲಿ 110 ರನ್‌ಗೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಅಪಾಯದಲ್ಲಿತ್ತು. ಆದರೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸಾಹಸದಿಂದ ತಂಡ 6 ವಿಕೆಟ್‌ಗೆ 288 ರನ್ ಬಾರಿಸಿತ್ತು. ಪ್ರತಿಯಾಗಿ ಅಫ್ಘಾನಿಸ್ತಾನ ತಂಡ 34.4 ಓವರ್‌ಗಳಲ್ಲಿ 139 ರನ್‌ಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ನ್ಯೂಜಿಲೆಂಡ್ ತಂಡ ತಾನು ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಗಿದೆ. ಕಿವೀಸ್ ವಿರುದ್ಧ ಗೆಲುವು ಸಾಧಿಸಬೇಕಾದಲ್ಲಿ ಅಫ್ಘಾನಿಸ್ತಾನ ತಂಡ, ತನ್ನ ಈವರೆಗಿನ ಅತ್ಯುತ್ತಮ ಚೇಸಿಂಗ್, ಚೆನ್ನೈನಲ್ಲಿ ತಂಡವೊಂದರ ಅತ್ಯುತ್ತಮ ಚೇಸಿಂಗ್ ಹಾಗೂ ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಗರಿಷ್ಠ ಚೇಸಿಂಗ್ ಅನ್ನು ಮಾಡಬೇಕಿತ್ತು. ಆದರೆ, ಇದಾವುದನ್ನು ಸಾಧಿಸಲು ಅಫ್ಘಾನಿಸ್ತಾನ ತಂಡಕ್ಕೆ ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಪರವಾಗಿ ವೇಗಿ ಲಾಕಿ ಫರ್ಗ್ಯೂಸನ್ 19 ರನ್‌ಗೆ 3 ವಿಕೆಟ್ ಉರುಳಿಸಿದರೆ, ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 39 ರನ್‌ಗೆ 3 ವಿಕೆಟ್ ಉರುಳಿಸಿದರು. ಟ್ರೆಂಟ್ ಬೌಲ್ಟ್ 2 ವಿಕೆಟ್ ಸಾಧನೆ ಮಾಡಿದರೆ, ಮ್ಯಾಟ್ ಹೆನ್ರಿ ಹಾಗೂ ಆಲ್ರೌಂಡರ್ ರಚಿನ್ ರವೀಂದ್ರಾ ಒಂದೊಂದು ವಿಕೆಟ್ ಪಡೆದುಕೊಂಡರು.
ಈ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಸಾಧನೆಯನ್ನೂ ಮಾಡಿದರು. ಕಿವೀಸ್ ಪರವಾಗಿ ಏಕದಿನದಲ್ಲಿ 100 ವಿಕೆಟ್ ಸಾಧನೆ ಮಾಡಿದ 2ನೇ ಸ್ಪಿನ್ನರ್ ಸ್ಯಾಂಟ್ನರ್. ಮೊದಲ ಆಟಗಾರ ಡೇನಿಯಲ್ ವೆಟೋರಿ.
ಅಫ್ಘಾನಿಸ್ತಾನ ತಂಡದ ಪರವಾಗಿ ಬ್ಯಾಟಿಂಗ್‌ನಲ್ಲಿ ಯಾರೂ ಗಮನಸೆಳೆಯಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಹಮತ್ ಶಾ ಗಳಿಸಿದ 36 ರನ್ ತಂಡದ ಗರಿಷ್ಠ ಮೊತ್ತವಾಗಿತ್ತು. ಅಜ್ಮತುಲ್ಲಾ ಓಮರ್‌ಜಾಯ್ (27), ಐಕ್ರಾಮ್ ಐಖಿಲ್ (19) ಕೆಲ ರನ್‌ಗಳನ್ನು ಬಾರಿಸಿದರೂ ಇದು ತಂಡಕ್ಕೆ ಯಾವುದೇ ನೆರವು ನೀಡಲಿಲ್ಲ. ಆರಂಭಿಕ ಆಟಗಾರರಾದ ರಹಮತುಲ್ಲಾ ಗುರ್ಬಾಜ್ (11), ಇಬ್ರಾಹಿಂ ಜದ್ರಾನ್ (14) ಅಲ್ಪ ಮೊತ್ತಕ್ಕೆ ಔಟಾದರೆ, ನಾಯಕ ಹಸ್ಮತುಲ್ಲಾ ಶಾಹಿದಿ ಕೇವಲ 8 ರನ್ ಬಾರಿಸಿದರು. ಉಳಿದಂತೆ ಮತ್ತೆ ಯಾವುದೇ ಬ್ಯಾಟ್ಸ್‌ಮನ್‌ಗಳು ಕಿವೀಸ್ ತಂಡ ಬೌಲಿಂಗ್ ಹೋರಾಟವನ್ನು ಎದುರಿಸಲಿಲ್ಲ.
149 ರನ್ ಗೆಲುವು ನ್ಯೂಜಿಲೆಂಡ್ ತಂಡಕ್ಕೆ ವಿಶ್ವಕಪ್‌ನಲ್ಲಿ ರನ್ ಅಂತರದ 2ನೇ ದೊಡ್ಡ ಗೆಲುವು ಎನಿಸಿದೆ. ಇದಕ್ಕೂ ಮುನ್ನ 1975ರಲ್ಲಿ ಈಸ್ಟ್ ಆಫ್ರಿಕಾ ವಿರುದ್ಧ ಬರ್ಮಿಂಗ್‌ಹ್ಯಾಂನಲ್ಲಿ 181 ರನ್ ಗೆಲುವು ಕಂಡಿದ್ದು ನ್ಯೂಜಿಲೆಂಡ್‌ನ ದೊಡ್ಡ ವಿಶ್ವಕಪ್ ಗೆಲುವು ಎನಿಸಿದೆ. ಇನ್ನು ವಿಶ್ವಕಪ್‌ನಲ್ಲಿ ಇದು ಅಫ್ಘಾನಿಸ್ತಾನ ತಂಡದ ವಿಶ್ವಕಪ್‌ನ 2ನೇ ಕನಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾರ್ಡಿಫ್‌ನಲ್ಲಿ 125 ರನ್‌ಗೆ ಆಲೌಟ್ ಆಗಿರುವುದು ವಿಶ್ವಕಪ್‌ನ ಕನಿಷ್ಠ ಮೊತ್ತವಾಗಿದೆ.
'ಟೀಂ ಇಂಡಿಯಾವನ್ನು ಸೋಲಿಸಿದ್ರೆ ನಿಮ್ಮ ಜತೆ ಡೇಟ್ ಮಾಡ್ತೇನೆ': ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್ ನಟಿಯ ಬೋಲ್ಡ್ ಆಫರ್